ಬೆಳಗಾಯಿತು ವಾರ್ತೆ | Www.belagayithu.in
ಬೆಂಗಳೂರು: ರಾಜ್ಯದ ಈವರಗಿನ ಅತಿ ಸುದೀರ್ಘ ಅವಧಿಯವರೆಗೆ ಮುಖ್ಯಮಂತ್ರಿಯಾಗಿದ್ದ ದಿ.ದೇವರಾಜು ಅರಸು ಅವರ ದಾಖಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಮುರಿಯಲಿದ್ದು, ಇನ್ನೊಂದೇ ದಿನ ಅಂದರೆ ಬುಧವಾರ ಅರಸು ಅವರ ಹೆಸರಿನಲ್ಲಿ ಈವರೆಗೂ ಇದ್ದ ದಾಖಲೆಯನ್ನು ಮುರಿದು ನಾಡಿನ ಅತಿ ಸುದೀರ್ಘ ಅವಧಿಯ ಸಿಎಂ ಎಂಬ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.
ಜ.6ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 2,792 ದಿನ ಪೂರೈಸಲಿದ್ದು, ಆ ಮೂಲಕ ದೇವರಾಜು ಅರಸು ಅವರ ದಾಖಲೆ ಸರಿಗಟ್ಟಲಿದ್ದಾರೆ.
ದೇವರಾಜ ಅರಸು ಅವರು 1972ರ ಮಾ.20ರಂದು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿದಿದ್ದರು. 1977ರ ಡಿ.31ರವರೆಗೆ ಅಂದರೆ 5 ವರ್ಷ 286 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ 1978ರ ಫೆ.28ರಿಂದ 1980ರ ಜ.12ರವರೆಗೆ ಅಂದರೆ 1 ವರ್ಷ 318 ದಿನಗಳ ಕಾಲ ಸೇರಿ ಒಟ್ಟು 2,792 ದಿನಗಳಕಾಲ ಮುಖ್ಯಮಂತ್ರಿಯಾಗಿದ್ದರು.
ದೀರ್ಘ ಅವಧಿ ಮುಖ್ಯಮಂತ್ರಿ ಚುಕ್ಕಾಣಿ ಹಿಡಿದಿದ್ದ ದೇವರಾಜ ಅರಸು ಅವರ ಈ ದಾಖಲೆಯನ್ನು ನಾಲ್ಕೂವರೆ ದಶಕಗಳ ಬಳಿಕ ಸಿದ್ದರಾಮಯ್ಯ ಅವರು ಮುರಿಯುತ್ತಿದ್ದಾರೆ.





