ಬೆಳಗಾಯಿತು ವಾರ್ತೆ
ಬಳ್ಳಾರಿ: ಮನೆ ನಿರ್ಮಾಣವೆಂದರೆ ಕೇವಲ ನಾಲ್ಕು ಗೋಡೆಗಳಲ್ಲ. ಅದು ಒಂದು ಕುಟುಂಬದ ಕನಸು, ಭವಿಷ್ಯದ ಭದ್ರತೆ ಹಾಗೂ ಬದುಕಿನ ಹೊಸ ಅಧ್ಯಾಯವಾಗಿದೆ. ನಿರ್ಮಾಣ ಕ್ಷೇತ್ರದ ಹೊಸ ತಂತ್ರಜ್ಞಾನ, ಆಧುನಿಕ ಉತ್ಪನ್ನಗಳು ಹಾಗೂ ನಿರ್ಮಾಣ ಸಾಮಗ್ರಿಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ACCEA ವತಿಯಿಂದ ಆಯೋಜಿಸಿರುವ ‘ನಿರ್ಮಾಣ್–2026’ ಪ್ರದರ್ಶನವು ಮನೆ ನಿರ್ಮಿಸುವವರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಜಿಲ್ಲಾಧಿಕಾರಿ ವಿ. ನಾಗೇಂದ್ರ ಪ್ರಸಾದ್ ಹೇಳಿದರು.
ನಗರದ ಐಟಿಐ ಮೈದಾನದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ‘ನಿರ್ಮಾಣ್–2026’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕನಸಿನ ಮನೆ ಕಟ್ಟಲು ಮುಂದಾಗಿರುವ ಪ್ರತಿಯೊಬ್ಬರಿಗೂ ಹೊಸ ಮಾಹಿತಿ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಇಂತಹ ಕಾರ್ಯಕ್ರಮಗಳು ಒದಗಿಸುತ್ತವೆ. ಮನೆ ನಿರ್ಮಾಣಕ್ಕೆ ಅಗತ್ಯವಿರುವ ವಿವಿಧ ಸಾಮಗ್ರಿಗಳು, ಆಧುನಿಕ ತಂತ್ರಜ್ಞಾನ ಹಾಗೂ ಗುಣಮಟ್ಟದ ಉತ್ಪನ್ನಗಳ ಕುರಿತು ಒಂದೇ ಸ್ಥಳದಲ್ಲಿ ಮಾಹಿತಿ ಪಡೆಯಲು ಇದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ಎಸ್. ಸತ್ಯನಾರಾಯಣ ಮಾತನಾಡಿ, ಬಳ್ಳಾರಿ ಜನರ ಅಗತ್ಯ ಹಾಗೂ ನಾಡಿಮಿಡಿತವನ್ನು ಅರಿತು ಉತ್ತಮ ಗುಣಮಟ್ಟದ ನಿರ್ಮಾಣ ಸಾಮಗ್ರಿಗಳ ಎಕ್ಸ್ಪೋ ಆಯೋಜಿಸಲಾಗಿದೆ. ತಂತ್ರಜ್ಞಾನ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡುವ ಮೂಲಕ ಮನೆ ನಿರ್ಮಾಣಕ್ಕೆ ಅಗತ್ಯವಿರುವ ವಿವಿಧ ಸಾಮಗ್ರಿಗಳನ್ನು ಒಂದೇ ಸೂರಿನಡಿ ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮ್ಮೇರ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅವ್ವಾರು ಮಂಜುನಾಥ, ಕ್ರೀಸ್ಮರ್ ಕಂಪನಿ ಅಧ್ಯಕ್ಷ ಡಾ. ರಮೇಶ್ ಗೋಪಾಲ್, ACCEA ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಶೀರಿಷಾ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ಪ್ರಾರ್ಥಿಸಿದರು. ರಾಕೇಶ್ ಬಿ.ಟಿ. ವಂದಿಸಿದರು.





