ಬಳ್ಳಾರಿಯಲ್ಲಿ ತಾಯಿ, ಇಬ್ಬರು ಮಕ್ಕಳ ಸಾವು: ಕಾಲುವೆಗೆ ಹಾರಿ ಆತ್ಮಹತ್ಯೆ ಶಂಕೆ


ಕೌಟುಂಬಿಕ ಕಲಹ, ಕಿರುಕುಳದ ಆರೋಪ; ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದ ಮಿಲ್ಲರ್‌ಪೇಟೆಯ ಕವಿತಾ ಐಸ್ ಫ್ಯಾಕ್ಟರಿ ಬಳಿಯ ನಿವಾಸಿ ಲತೀಫಾ ಸಿಮ್ರಾನ್ (29) ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಅಲ್ಲೀಪುರ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಲತೀಫಾ ಸಿಮ್ರಾನ್ ಅವರ ಪುತ್ರ ಮಹಮ್ಮದ್ ಅಯಾನ್ (3) ಮತ್ತು ಪುತ್ರಿ ಆಯಿಷಾ ಫಾತಿಮಾ (2) ಮೃತಪಟ್ಟ ಮಕ್ಕಳು. ಮಂಗಳವಾರ ಬೆಳಿಗ್ಗೆ ಸುಮಾರು 9.30ರ ವೇಳೆಗೆ ಈ ಘಟನೆ ನಡೆದಿದೆ ಎಂದು ಮೃತ ಮಹಿಳೆಯ ತಾಯಿ ಆಯಿಷಾ ಪರ್ವೀನ್ ತಿಳಿಸಿದ್ದಾರೆ.
ಪತಿ ವಿರುದ್ಧ ಕಿರುಕುಳದ ಆರೋಪ
ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳ ಪ್ರಕಾರ, ಲತೀಫಾ ಸಿಮ್ರಾನ್ ಅವರ ಪತಿ ಸದ್ದಾಂ ಹುಸೇನ್ ಬೇರೆ ಮಹಿಳೆಯೊಂದಿಗೆ ಸಂಪರ್ಕ ಹೊಂದಿದ್ದು, ಆಕೆಗೆ ಹೊಸ ಮನೆ ನಿರ್ಮಿಸಲು ಮುಂದಾಗಿದ್ದರು ಎನ್ನಲಾಗಿದೆ.
ಮನೆ ನಿರ್ಮಾಣಕ್ಕೆ ₹10 ಲಕ್ಷ ಅಗತ್ಯವಿದೆ ಎಂದು ಪತ್ನಿಗೆ ತಿಳಿಸಿ, ಹಣದ ವಿಚಾರವಾಗಿ ಪ್ರತಿದಿನ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಮಗಳ ಮದುವೆಯ ಸಂದರ್ಭದಲ್ಲಿ ನೀಡಲಾಗಿದ್ದ 15 ತೊಲೆ ಚಿನ್ನಾಭರಣವನ್ನು ಮಾರಾಟ ಮಾಡಿದ್ದರೆಂಬ ಆರೋಪವೂ ಕೇಳಿಬಂದಿದೆ.
ತನಿಖೆಯಿಂದ ಸತ್ಯಾಂಶ ಬಹಿರಂಗ
ಕುಟುಂಬದಲ್ಲಿ ಉಂಟಾಗಿದ್ದ ಎನ್ನಲಾದ ಕೌಟುಂಬಿಕ ಕಲಹ, ಹಣಕಾಸಿನ ವಿಚಾರ ಹಾಗೂ ಕಿರುಕುಳದ ಆರೋಪಗಳು ಪ್ರಕರಣದಲ್ಲಿ ಮಹತ್ವ ಪಡೆದಿವೆ. ಆದರೆ, ತಾಯಿ ಮತ್ತು ಇಬ್ಬರು ಮಕ್ಕಳು ಸಾವಿಗೀಡಾಗಲು ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ದೂರುದಾರರು ಮಾಡಿರುವ ಆರೋಪಗಳು ತನಿಖೆಯಿಂದ ದೃಢಪಡಬೇಕಿದೆ.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles