ಕೊರತೆ ಸೃಷ್ಟಿಸಿ ಹೋದ ಮುಂಗಾರು: ಬಳ್ಳಾರಿಗೆ ಎದುರಾಗುತ್ತಿದೆಯೇ ಜಲ ಸಂಕಷ್ಟ?

ಬೆಳಗಾಯಿತು ವಾರ್ತೆ
ಬಳ್ಳಾರಿ: ಮುಂಗಾರು ಮುಗಿದಿದೆ. ಆದರೆ ಬಳ್ಳಾರಿಯ ಪಾಲಿಗೆ ಮಳೆ ಮಾತ್ರ ಕೈಕೊಟ್ಟಿದೆ. ಜೂನ್‌ 1ರಿಂದ ಸೆಪ್ಟೆಂಬರ್‌ 30ರವರೆಗಿನ ನೈರುತ್ಯ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಬರೋಬ್ಬರಿ ಶೇ.49ರಷ್ಟು ಕಡಿಮೆ ಮಳೆಯಾಗಿರುವುದು ಮುಂದಿನ ದಿನಗಳ ಆತಂಕವನ್ನು ಹೆಚ್ಚಿಸಿದೆ. ಮಳೆಯ ಕೊರತೆ ಕೇವಲ ಅಂಕಿ-ಅಂಶಕ್ಕೆ ಸೀಮಿತವಾಗದೆ, ಕೃಷಿ, ಕುಡಿಯುವ ನೀರು ಹಾಗೂ ಜಲಾಶಯಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಎದುರಾಗಿದೆ.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಪ್ರಕಾರ, ಮುಂಗಾರು ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ವಾಡಿಕೆಯಂತೆ 36.56 ಸೆಂ.ಮೀ. ಮಳೆಯಾಗಬೇಕಿತ್ತು. ಆದರೆ ವಾಸ್ತವವಾಗಿ ಸುರಿದಿರುವುದು ಕೇವಲ 18.63 ಸೆಂ.ಮೀ. ಮಾತ್ರ. ರಾಜ್ಯದ ಸರಾಸರಿ ಮಳೆ ಕೊರತೆ ಶೇ.35ರಷ್ಟಿದ್ದರೆ, ಬಳ್ಳಾರಿ ಜಿಲ್ಲೆ ಅದಕ್ಕಿಂತಲೂ ಹೆಚ್ಚಿನ ಕೊರತೆಯನ್ನು ಎದುರಿಸಿದೆ.
ಹೋಬಳಿಗಳಲ್ಲೂ ಮಳೆಯ ಹಿನ್ನಡೆ
ಮಳೆಯ ಕೊರತೆ ಜಿಲ್ಲೆಯ ಬಹುತೇಕ ಹೋಬಳಿಗಳಲ್ಲೂ ಕಂಡುಬಂದಿದೆ. ಸಂಡೂರು ತಾಲ್ಲೂಕಿನ ತೋರಣಗಲ್ಲು ಹೋಬಳಿಯಲ್ಲಿ ವಾಡಿಕೆ ಮಳೆಗೆ ಹೋಲಿಸಿದರೆ ಶೇ.69ರಷ್ಟು ಕೊರತೆ ದಾಖಲಾಗಿದ್ದು, ಜಿಲ್ಲೆಯಲ್ಲೇ ಅತಿ ಹೆಚ್ಚು ಮಳೆ ಕೊರತೆ ಕಂಡುಬಂದ ಪ್ರದೇಶವಾಗಿದೆ. ಕಂಪ್ಲಿ ಹೋಬಳಿಯಲ್ಲಿ ಶೇ.63, ಕುರುಗೋಡು ಹೋಬಳಿಯಲ್ಲಿ ಶೇ.65ರಷ್ಟು ಕೊರತೆ ದಾಖಲಾಗಿದೆ.
ತೆಕ್ಕಲಕೋಟೆಯಲ್ಲಿ ಶೇ.60, ಕುರುಗೋಡಿನಲ್ಲಿ ಶೇ.56 ಹಾಗೂ ಚೋರನೂರಿನಲ್ಲಿ ಶೇ.54ರಷ್ಟು ಮಳೆ ಕೊರತೆ ಕಂಡುಬಂದಿದೆ. ಇದಕ್ಕೆ ಹೋಲಿಸಿದರೆ ಕೋಳೂರು ಹೋಬಳಿಯಲ್ಲಿ ಶೇ.12, ಸಿರುಗುಪ್ಪದಲ್ಲಿ ಶೇ.25 ಹಾಗೂ ಹಚ್ಚೊಳ್ಳಿಯಲ್ಲಿ ಶೇ.26ರಷ್ಟು ಕೊರತೆ ದಾಖಲಾಗಿದೆ.
ಸೆಪ್ಟೆಂಬರ್‌ನಲ್ಲೂ ಮಳೆ ಕೈಕೊಟ್ಟಿತು
ಮುಂಗಾರು ಮುಕ್ತಾಯದ ಕೊನೆಯ ತಿಂಗಳಾದ ಸೆಪ್ಟೆಂಬರ್‌ನಲ್ಲೂ ಜಿಲ್ಲೆಗೆ ನಿರೀಕ್ಷಿತ ಮಳೆ ಬಂದಿಲ್ಲ. ಸೆಪ್ಟೆಂಬರ್‌ನಲ್ಲಿ 13.54 ಸೆಂ.ಮೀ. ವಾಡಿಕೆ ಮಳೆಯಾಗಬೇಕಿದ್ದರೆ, ಕೇವಲ 6.71 ಸೆಂ.ಮೀ. ಮಳೆಯಾಗಿದೆ. ಅಂದರೆ ಶೇ.50ರಷ್ಟು ಕೊರತೆ.
ಸೆಪ್ಟೆಂಬರ್‌ 25ರಿಂದ ಅಕ್ಟೋಬರ್‌ 1ರವರೆಗಿನ ಏಳು ದಿನಗಳಲ್ಲಿ 3.80 ಸೆಂ.ಮೀ. ಮಳೆ ನಿರೀಕ್ಷಿಸಲಾಗಿತ್ತು. ಆದರೆ ಕೇವಲ 0.70 ಸೆಂ.ಮೀ. ಮಳೆಯಾಗಿದ್ದು, ಶೇ.82ರಷ್ಟು ಕೊರತೆ ದಾಖಲಾಗಿದೆ.
ಜನವರಿ 1ರಿಂದ ಅಕ್ಟೋಬರ್‌ 1ರವರೆಗಿನ ಅವಧಿಯಲ್ಲಿಯೂ ಮಳೆಯ ಚಿತ್ರಣ ಆಶಾದಾಯಕವಾಗಿಲ್ಲ. ಈ ಅವಧಿಯಲ್ಲಿ 44.73 ಸೆಂ.ಮೀ. ವಾಡಿಕೆ ಮಳೆಯಾಗಬೇಕಿದ್ದರೆ, 25.90 ಸೆಂ.ಮೀ. ಮಾತ್ರ ಮಳೆಯಾಗಿದ್ದು, ಶೇ.42ರಷ್ಟು ಕೊರತೆ ಉಂಟಾಗಿದೆ.
ಬೆಳೆಗಳ ಮೇಲೆ ಬರದ ಹೊಡೆತ
ಮಳೆಯ ಅಭಾವದ ನೇರ ಪರಿಣಾಮ ಕೃಷಿ ಕ್ಷೇತ್ರದ ಮೇಲೆ ಬಿದ್ದಿದೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಣಸಿನಕಾಯಿ, ಹತ್ತಿ, ಮೆಕ್ಕೆಜೋಳ ಹಾಗೂ ಶೇಂಗಾ ಬೆಳೆಗಳು ತೇವಾಂಶದ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ. ಮಳೆಯನ್ನೇ ಅವಲಂಬಿಸಿರುವ ರೈತರಿಗೆ ಈ ವರ್ಷ ಹೂಡಿಕೆ ಮಾಡಿದ ಹಣವನ್ನು ವಾಪಸ್ ಪಡೆಯುವ ಸವಾಲು ಎದುರಾಗಿದೆ.
ತುಂಗಭದ್ರಾ ಜಲಾಶಯದ ನೀರಾವರಿ ವ್ಯವಸ್ಥೆಯನ್ನು ಅವಲಂಬಿಸಿರುವ ತಾಲ್ಲೂಕುಗಳಲ್ಲೂ ಮುಂದಿನ ದಿನಗಳಲ್ಲಿ ನೀರಿನ ನಿರ್ವಹಣೆ ದೊಡ್ಡ ಸವಾಲಾಗುವ ಸಾಧ್ಯತೆ ಇದೆ. ಜಲಮೂಲಗಳ ಮೇಲೆ ಒತ್ತಡ ಹೆಚ್ಚಿದರೆ ಬೇಸಿಗೆಯಲ್ಲಿ ಕೃಷಿಯಷ್ಟೇ ಅಲ್ಲದೆ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರುವ ಆತಂಕವಿದೆ.
ಹಿಂಗಾರು ಮೇಲೂ ನಿರೀಕ್ಷೆ ಕಡಿಮೆ
ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರೈತರ ದೃಷ್ಟಿ ಇದೀಗ ಹಿಂಗಾರು ಮಳೆಯತ್ತ ನೆಟ್ಟಿದೆ. ಆದರೆ ಹವಾಮಾನ ಮುನ್ಸೂಚನೆಗಳು ಹೆಚ್ಚಿನ ಭರವಸೆ ಮೂಡಿಸುತ್ತಿಲ್ಲ.
“ಎಲ್‌ನಿನೊ ಪರಿಣಾಮ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಿದೆ. ಹೀಗಾಗಿ ಅಕ್ಟೋಬರ್‌ನಲ್ಲಿಯೂ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಹಿಂಗಾರು ಕೂಡ ಆಶಾದಾಯಕವಾಗಿಲ್ಲ. ತಾಪಮಾನ ಏರಿಕೆಯಾಗುವ ಸಾಧ್ಯತೆ ಇದ್ದು, ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ” ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಗ್ರಾಮೀಣ ಕೃಷಿ ಮೌಸಮ್ ಸೇವಾ ತಾಂತ್ರಿಕ ಅಧಿಕಾರಿ ಲಾವಣ್ಯ ತಿಳಿಸಿದ್ದಾರೆ.
ಈಗಲೇ ಬೇಕು ಮುನ್ನೆಚ್ಚರಿಕೆ
ಮುಂಗಾರು ನೀಡಿದ ಕೊರತೆ ಮುಂದಿನ ಬೇಸಿಗೆಯ ಸಂಕಷ್ಟಕ್ಕೆ ಮುನ್ಸೂಚನೆಯಂತಿದೆ. ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಲಭ್ಯವಿರುವ ಜಲಮೂಲಗಳ ಸಂರಕ್ಷಣೆ, ಕುಡಿಯುವ ನೀರಿನ ಸಮರ್ಪಕ ನಿರ್ವಹಣೆ, ಬೆಳೆಗಳಿಗೆ ನೀರಿನ ಲಭ್ಯತೆ ಹಾಗೂ ಬರ ನಿರ್ವಹಣಾ ಕ್ರಮಗಳತ್ತ ಆಡಳಿತ ತಕ್ಷಣ ಗಮನ ಹರಿಸಬೇಕಿದೆ.
ಮಳೆ ಬಾರದಿರುವುದನ್ನು ಕೇವಲ ಪ್ರಕೃತಿಯ ವೈಫಲ್ಯವೆಂದು ನೋಡದೆ, ಮುಂದಿನ ತಿಂಗಳುಗಳಲ್ಲಿ ಎದುರಾಗಬಹುದಾದ ನೀರಿನ ಕೊರತೆಯನ್ನು ಎದುರಿಸಲು ಈಗಿನಿಂದಲೇ ಯೋಜನೆ ರೂಪಿಸುವುದು ಅಗತ್ಯ. ಇಲ್ಲವಾದರೆ ಮುಂಗಾರು ಬಿಟ್ಟುಹೋದ ಮಳೆಯ ಕೊರತೆ, ಬೇಸಿಗೆಯಲ್ಲಿ ಜಲ ಸಂಕಷ್ಟವಾಗಿ ಮರಳುವ ಅಪಾಯವಿದೆ.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles