ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ವಿವಿಧ ಶಾಲಾ-ಕಾಲೇಜುಗಳಲ್ಲಿ ಮತಯಾಚನೆ
ಬೆಳಗಾಯಿತು ವಾರ್ತೆ
ಬಳ್ಳಾರಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರ ಪರ ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರ ನೇತೃತ್ವದಲ್ಲಿ ಸೋಮವಾರ ನಗರದ ವಿವಿಧ ಶಾಲಾ-ಕಾಲೇಜುಗಳಲ್ಲಿ ಮತಯಾಚನೆ ನಡೆಯಿತು.
ನಗರದ ಫಸ್ಟ್ಗೇಟ್ನ ಗಾಲಿ ರುಕ್ಮಿಣಿಮ್ಮ ಚಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಸತ್ಯನಾರಾಯಣಪೇಟೆಯ ಸರಳಾದೇವಿ ಕಾಲೇಜು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದ ಜೆಡಿಎಸ್ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶಿಕ್ಷಕ ಮತದಾರರನ್ನು ಭೇಟಿಯಾಗಿ ಮೈತ್ರಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸರಳಾದೇವಿ ಕಾಲೇಜಿನಲ್ಲಿ ಮಾತನಾಡಿದ ಮೀನಳ್ಳಿ ತಾಯಣ್ಣ, ಮುಂಬರುವ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸೇರಿದಂತೆ ಮುಂದಿನ ಎಲ್ಲ ಚುನಾವಣೆಗಳನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿ ಎದುರಿಸುವ ಕುರಿತು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ. ಬಳ್ಳಾರಿಯಲ್ಲಿಯೂ ಈ ಕುರಿತು ಸಭೆ ನಡೆಸಿ ಚರ್ಚಿಸಲಾಗಿದೆ. ಶಿಕ್ಷಕ ಮತದಾರರು ಮೈತ್ರಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರನ್ನು ಬೆಂಬಲಿಸಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಹಿಂದೆ ಕೇವಲ 210 ಕಾಲೇಜುಗಳಿದ್ದವು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಲೇಜುಗಳ ಸಂಖ್ಯೆ 440ಕ್ಕೆ ಹೆಚ್ಚಾಯಿತು. ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ಕುಮಾರಸ್ವಾಮಿ ಶ್ರಮಿಸಿದ್ದಾರೆ. ಇದನ್ನು ಶಿಕ್ಷಕರು ಹಾಗೂ ಮತದಾರರು ಗಮನದಲ್ಲಿಟ್ಟುಕೊಂಡು ಅ.23ರಂದು ನಡೆಯಲಿರುವ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ಹೇಳಿದರು.
2028ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಖಚಿತವಾಗಿದ್ದು, ಶಿಕ್ಷಕರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಾಯಣ್ಣ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕ ಡಾ. ಟಿ. ದುರಗಪ್ಪ ಮಾತನಾಡಿ, ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸುವಂತೆ ಒತ್ತಾಯಿಸಿದರು.
ಉಪನ್ಯಾಸಕರಾದ ಹನುಮೇಶ್, ಮಾರೆಪ್ಪ ಎ.ಕೆ., ರಫೀಕ್, ಗುರುರಾಜ್, ಡಾ. ಬಸಪ್ಪ, ಜೆಡಿಎಸ್ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಅದ್ದಿಗೇರಿ ರಾಮಣ್ಣ, ನಗರ ಅಧ್ಯಕ್ಷ ಹೊನ್ನೂರು ಸ್ವಾಮಿ, ಎಸ್ಸಿ ಅಧ್ಯಕ್ಷ ವಸಂತ ಕುಮಾರ್, ಭಾಷಾ, ಜಯಲಕ್ಷ್ಮಿ, ಸ್ವಾತಿ, ಶಬಾನಾ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.





