ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಆನ್‌ಲೈನ್ ಮೂಲಕ ಔಷಧಿ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘ ನೀಡಿದ ಕರೆ ಹಿನ್ನೆಲೆಯಲ್ಲಿ ಬುಧವಾರ ಬಳ್ಳಾರಿ ಸೇರಿದಂತೆ ರಾಜ್ಯಾದ್ಯಂತ ಅನೇಕ ಮೆಡಿಕಲ್ ಮಳಿಗೆಗಳು ಬಂದ್ ಆಗಿವೆ.
ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಇರುವ ಹಲವಾರು ಮೆಡಿಕಲ್ ಮಳಿಗೆಗಳು ಬಂದ್ ಆಗಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಕೆಲವರು ಡಾಕ್ಟರ್ ನೀಡಿದ ಚೀಟಿಯನ್ನು ಹಿಡಿದುಕೊಂಡು ಓಡಾಡುವ ದೃಶ್ಯ ಕಂಡು ಬಂದಿದೆ.
ರಾಜ್ಯದಲ್ಲಿ ಸುಮಾರು 26 ಸಾವಿರಕ್ಕೂ ಹೆಚ್ಚು ಮೆಡಿಕಲ್ ಮಳಿಗೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದು, ಆನ್‌ಲೈನ್ ಫಾರ್ಮಸಿಗಳ ಅಕ್ರಮ ಮಾರಾಟ, ಭಾರೀ ರಿಯಾಯಿತಿ ನೀತಿ ಹಾಗೂ ಸಣ್ಣ ವ್ಯಾಪಾರಿಗಳಿಗೆ ಉಂಟಾಗುತ್ತಿರುವ ನಷ್ಟದ ವಿರುದ್ಧ ಔಷಧಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಸಾರ್ವಜನಿಕರಿಗೆ ಔಷಧಿ ಕೊರತೆ ಉಂಟಾಗದಂತೆ ಸರ್ಕಾರಿ ಆಸ್ಪತ್ರೆಗಳ ಔಷಧ ಮಳಿಗೆಗಳು, ಜನೌಷಧಿ ಕೇಂದ್ರಗಳು ಹಾಗೂ ಕೆಲವು ಕಾರ್ಪೊರೇಟ್ ಫಾರ್ಮಸಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಅಪೋಲೋ ಮತ್ತು ಮೆಡ್‌ಪ್ಲಸ್ ಸೇರಿದಂತೆ ಕೆಲವು ಮೆಡಿಕಲ್ ಸರಪಳಿ ಮಳಿಗೆಗಳು ಬಂದ್‌ಗೆ ಬೆಂಬಲ ನೀಡಿಲ್ಲ ಎಂದು ತಿಳಿದು ಬಂದಿದೆ.
ಇ-ಫಾರ್ಮಸಿ ನಿಯಂತ್ರಣ, ನಕಲಿ ಔಷಧಿ ಮಾರಾಟ ತಡೆ ಹಾಗೂ ಸಣ್ಣ ಮೆಡಿಕಲ್ ವ್ಯಾಪಾರಿಗಳ ರಕ್ಷಣೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.





