ಬೆಳಗಾಯಿತು ವಾರ್ತೆ|www.belagayithu.in
ಬೆಂಗಳೂರು : ‘ಆ್ಯಪ್’ಗಳ ಮೂಲಕ ಆನ್‍ಲೈನ್‍ನಲ್ಲಿ ಔಷಧಿಗಳ ಮಾರಾಟವನ್ನು ವಿರೋಧಿಸಿ ‘ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ’ದ ನೇತೃತ್ವದಲ್ಲಿ ಮೇ 20ರಂದು ಕರ್ನಾಟಕವು ಸೇರಿದಂತೆ ದೇಶಾದ್ಯಂತ ಔಷಧ ಮಾರಾಟ ಮಳಿಗೆಗಳ ಮಾಲಕರು ಬಂದ್ ಕರೆ ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿರುವ 6,500ಕ್ಕೂ ಅಧಿಕ ಮೆಡಿಕಲ್ ಶಾಪ್‍ಗಳು ಸೇರಿದಂತೆ ರಾಜ್ಯದಲ್ಲಿನ 25 ಸಾವಿರಕ್ಕೂ ಅಧಿಕ ಔಷಧಿ ಮಾರಾಟ ಮಳಿಗೆಗಳು ಬಹುತೇಕ ಬಂದ್ ಆಗುವ ಸಾಧ್ಯತೆಗಳಿದ್ದು, ‘ಜೀವ ರಕ್ಷಕ ಔಷಧ’ಗಳನ್ನೇ ಆಶ್ರಯಿಸಿರುವ ಹಿರಿಯ ನಾಗರಿಕರು ಸೇರಿದಂತೆ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ.
ಬಂದ್ ತೀರ್ಮಾನ: ‘ಡೆಲವರಿ ‘ಆ್ಯಪ್’ ಆಧರಿತ ಆನ್‍ಲೈನ್ ಕಂಪೆನಿಗಳ ಅನಿಯಂತ್ರಿತ ವ್ಯವಹಾರದಿಂದ ಸ್ಥಳೀಯ ಮೆಡಿಕಲ್ ಶಾಪ್‍ಗಳು ಸಂಕಷ್ಟಕ್ಕೆ ಸಿಲುಕಿದ್ದು, ಆನ್‍ಲೈನ್ ಔಷಧಿಗಳ ಮಾರಾಟ ವಿರೋಧಿಸಿ ಮೇ 20ರಂದು ರಾಜ್ಯಾದ್ಯಂತ ಎಲ್ಲ ಮೆಡಿಕಲ್ ಶಾಪ್‍ಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ’ ಎಂದು ಕರ್ನಾಟಕ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ತಿಳಿಸಿದೆ.





