ಮೆಡಿಕಲ್ ಮಾಫಿಯಾ ವಿರುದ್ಧ ಕ್ರಮಕ್ಕೆ ಕರವೇ ಆಗ್ರಹ

ಔಷಧಗಳ ಬೆಲೆ ಏರಿಕೆ, ಆಸ್ಪತ್ರೆಗಳಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಆರೋಪ; ಸಮಗ್ರ ತನಿಖೆಗೆ ಒತ್ತಾಯ
ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದಲ್ಲಿ ಔಷಧಗಳ ಬೆಲೆ ಏರಿಕೆ, ಖಾಸಗಿ ಕ್ಲಿನಿಕ್‌ಗಳು ಹಾಗೂ ನರ್ಸಿಂಗ್‌ಹೋಮ್‌ಗಳಲ್ಲಿ ರೋಗಿಗಳಿಂದ ಹೆಚ್ಚಿನ ಶುಲ್ಕ ವಸೂಲಿ ಸೇರಿದಂತೆ ವಿವಿಧ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ವತಿಯಿಂದ ಬುಧವಾರ ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ವೇದಿಕೆಯ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾಧ್ಯಕ್ಷ ರಾಜಶೇಖರ್ (ರಾಜಣ್ಣ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಕೆಲವು ಔಷಧ ಮಳಿಗೆಗಳಲ್ಲಿ ಔಷಧಗಳ ಮೇಲೆ ಹೆಚ್ಚಿನ ಎಂಆರ್‌ಪಿ ನಿಗದಿಪಡಿಸಿ ಗ್ರಾಹಕರಿಂದ ಅಧಿಕ ಹಣ ಪಡೆಯಲಾಗುತ್ತಿದೆ ಎಂದು ಆರೋಪಿಸಲಾಯಿತು. ಔಷಧಗಳ ಬೆಲೆ ನಿಗದಿ ಹಾಗೂ ಮಾರಾಟ ವ್ಯವಸ್ಥೆಯ ಕುರಿತು ಸಂಬಂಧಪಟ್ಟ ಇಲಾಖೆಗಳು ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಲಾಯಿತು.
ಕೆಲವು ಔಷಧ ಮಳಿಗೆಗಳು ಹಾಗೂ ವೈದ್ಯರ ನಡುವೆ ಹಣಕಾಸಿನ ವ್ಯವಹಾರ ನಡೆಯುತ್ತಿದೆ. ನಿರ್ದಿಷ್ಟ ಔಷಧಗಳನ್ನು ಬರೆದುಕೊಡುವಂತೆ ವೈದ್ಯರ ಮೇಲೆ ಒತ್ತಡ ಹೇರುತ್ತಿರುವ ಆರೋಪಗಳ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕು ಎಂದು ವೇದಿಕೆ ಆಗ್ರಹಿಸಿತು.
ಖಾಸಗಿ ಕ್ಲಿನಿಕ್‌ಗಳು ಮತ್ತು ನರ್ಸಿಂಗ್‌ಹೋಮ್‌ಗಳಲ್ಲಿ ವಿವಿಧ ಶುಲ್ಕಗಳ ಹೆಸರಿನಲ್ಲಿ ರೋಗಿಗಳಿಂದ ಹೆಚ್ಚಿನ ಮೊತ್ತ ವಸೂಲಿ ಮಾಡಲಾಗುತ್ತಿದೆ. ಸಾಮಾನ್ಯ ಹೆರಿಗೆ ಸಾಧ್ಯವಿರುವ ಸಂದರ್ಭಗಳಲ್ಲಿಯೂ ಸಿಸೇರಿಯನ್ ಮಾಡಿಸಿ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂಬ ಆರೋಪಗಳಿದ್ದು, ಈ ಕುರಿತು ಆರೋಗ್ಯ ಇಲಾಖೆ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ಕೆಲವು ವೈದ್ಯರು ನಿಯಮಗಳನ್ನು ಮೀರಿ ಖಾಸಗಿ ಕ್ಲಿನಿಕ್‌ಗಳು ಹಾಗೂ ನರ್ಸಿಂಗ್‌ಹೋಮ್‌ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬ ಆರೋಪಗಳ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕರ ಆರೋಗ್ಯ ಹಾಗೂ ಆರ್ಥಿಕ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಔಷಧ ನಿಯಂತ್ರಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮನವಿಗೆ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಹಾಗೂ ಔಷಧ ನಿಯಂತ್ರಣ ಕಚೇರಿ ಎದುರು ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ವೇದಿಕೆ ಎಚ್ಚರಿಕೆ ನೀಡಿದೆ.
ಪ್ರತಿಭಟನೆಯಲ್ಲಿ ಕಟಗೆ ಸೂರಿ, ಮಲ್ಲಯ್ಯ, ರಾಜು, ದುರ್ಗೇಶ್, ಬಸಣ್ಣ, ಮಾರಣ್ಣ, ಶಶಿಧರ, ರವಿ, ಸೀನ, ವಾಸು, ನಾಗರಾಜ್, ನಾಗಪ್ಪ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.






Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles