ಬೆಳಗಾಯಿತು ವಾರ್ತೆ | Www.belagayithu.in
ನವದೆಹಲಿ: ಇರಾನ್‌ನ ತಜ್ಞರ ಸಭೆಯು ಹತ್ಯೆಗೀಡಾದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಎರಡನೇ ಮಗ 56 ವರ್ಷದ ಮೊಜ್ತಬಾ ಹೊಸೇನಿ ಖಮೇನಿ ಅವರನ್ನು ಇರಾನ್ ದೇಶದ ಹೊಸ ಸರ್ವೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಿದೆ. ಮೊಜ್ತಾಬಾ ಅವರು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆಂದು ಹೇಳಲಾಗಿದೆ. ಇರಾನ್‌ನ ತಜ್ಞರ ಸಭೆಯು ರೆವಲ್ಯೂಷನರಿ ಗಾರ್ಡ್ಸ್‌ನ ಒತ್ತಡದ ಮೇರೆಗೆ ಮೊಜ್ತಾಬಾ ಅವರನ್ನು ಆಯ್ಕೆ ಮಾಡಿದೆ ಎಂದು ಕೂಡ ಹೇಳಲಾಗುತ್ತಿದೆ.
ಮೊಜ್ತಾಬಾ ಅವರನ್ನು ಸಂಭಾವ್ಯ ಉತ್ತರಾಧಿಕಾರಿ ಎಂದು ಬಹಳ ಹಿಂದಿನಿಂದಲೂ ಪರಿಗಣಿಸಲಾಗಿದ್ದರೂ, ತಜ್ಞರಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಕಳೆದ ವರ್ಷ ಸಿದ್ಧಪಡಿಸಲಾದ ಸಂಭಾವ್ಯ ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ತನ್ನ ಮಗನ ಹೆಸರನ್ನು ಸೇರಿಸಿರಲಿಲ್ಲ. ಇರಾನ್‌ನ ಶಿಯಾ ಪಾದ್ರಿಗಳ ಸಂಪ್ರದಾಯದಲ್ಲಿ ತಂದೆಯ ಬಳಿಕ ಮಗಉತ್ತರಾಧಿಕಾರಿಯಾಗುವುದನ್ನು ಸಾಮಾನ್ಯವಾಗಿ ನೆಗೆಟಿವ್ ಎಂದು ಪರಿಗಣಿಸಲಾಗುತ್ತದೆ.
ಸಾರ್ವಜನಿಕ ಹುದ್ದೆಯನ್ನು ಎಂದಿಗೂ ಹೊಂದಿರದ ಮತ್ತು ಉನ್ನತ ದರ್ಜೆಯ ಧರ್ಮಗುರು ಅಲ್ಲದ ಮೊಜ್ತಬಾ ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ಇರಾನಿನ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರು IRGCಯೊಂದಿಗಿನ ನಿಕಟ ಸಂಪರ್ಕಗಳಿಗೆ ಹೆಸರುವಾಸಿಯಾಗಿದ್ದಾರೆ.





