ಬೆಳಗಾಯಿತು ವಾರ್ತೆ
ಬಳ್ಳಾರಿ: ಆರೋಗ್ಯವೇ ಮಹಾಭಾಗ್ಯವಾಗಿದ್ದು, ಇಂದಿನ ಒತ್ತಡದ ಜೀವನಶೈಲಿಯಿಂದ ಹಲವರು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬಳ್ಳಾರಿ ಜಿಲ್ಲಾ ಮುಸ್ಲಿಂ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಸಂಘದ ಹಿರಿಯ ಸಲಹೆಗಾರರಾದ ಮೆಹತಾಬ್ ಅವರು ಹೇಳಿದರು
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಬಳ್ಳಾರಿಯ ಮಹಮ್ಮದೀಯ ಕಾಲೇಜಿನ ಫಸ್ಟ್ ಗೇಟ್ ಸಮೀಪದ ಆವರಣದಲ್ಲಿ ಸೆ.20ರಂದು ಶಿಬಿರ ನಡೆಯಲಿದೆ. ಸರ್ಕಾರಿ ನೌಕರರು ಮಾತ್ರವಲ್ಲದೆ ಸರ‍್ವಜನಿಕರೂ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.
ಶಿಬಿರದಲ್ಲಿ ಹೃದಯ ರೋಗ, ಮೂಳೆ ಮತ್ತು ಕೀಲುಗಳು, ಕಣ್ಣು, ಕಿವಿ–ಮೂಗು–ಗಂಟಲು, ಮಹಿಳೆಯರ ಆರೋಗ್ಯ ಹಾಗೂ ಮಕ್ಕಳ ಆರೋಗ್ಯ ಸೇರಿದಂತೆ ವಿವಿಧ ವಿಭಾಗಗಳ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಆರೋಗ್ಯ ಸಲಹೆಗಳನ್ನು ನೀಡಲಾಗುತ್ತದೆ. ಮಧುಮೇಹ, ರಕ್ತದೊತ್ತಡ ಸೇರಿದಂತೆ ಅಗತ್ಯ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ಮಾಡಿಸಿಕೊಳ್ಳುವ ಅವಕಾಶವಿದ್ದು, ಅಗತ್ಯವಿರುವವರಿಗೆ ವೈದ್ಯರ ಸಲಹೆಯಂತೆ ಮುಂದಿನ ಚಿಕಿತ್ಸೆಯ ಕುರಿತು ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.
ಸಂಘವು ಕೇವಲ ಸರ್ಕಾರಿ ನೌಕರರ ಹಕ್ಕುಗಳು ಮತ್ತು ಕ್ಷೇಮಾಭಿವೃದ್ಧಿಗೆ ಸೀಮಿತವಾಗದೆ, ಸಾರ್ವಜನಿಕರ ಬದುಕಿನಲ್ಲೂ ಸಾಮಾಜಿಕ ಕಳಕಳಿಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ. ಎಲ್ಲರೊಂದಿಗೆ ಭಾವೈಕ್ಯತೆ ಮತ್ತು ಸಹಬಾಳ್ವೆಯ ಮನೋಭಾವದಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದರು.
ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಈ ಸಂದರ್ಭದಲ್ಲಿ ಶೆಕ್ಷಾವಲಿ, , ದಾದಾಪೀರ್, ಅಲ್ಲಬಕಸ್, ಶೇಕ್ಷಾವಲಿ, ಇಲಿಯಾಜ್, ಮಹಮ್ಮದ್ ರೀಜ್ವಾನ್ ಸೇರಿದಂತೆ ಇತರರು ಇದ್ದರು.
, ,





