ಬಳ್ಳಾರಿಯಲ್ಲಿ ರೈತ ಸಂತೆಗೆ ಚಾಲನೆ : ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ಕಡಿವಾಣ

ಬೆಳಗಾಯಿತು ವಾರ್ತೆ
ಬಳ್ಳಾರಿ: ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದರ ಜತೆಗೆ ಗ್ರಾಹಕರಿಗೆ ತಾಜಾ, ಗುಣಮಟ್ಟದ ಹಾಗೂ ವಿಷಮುಕ್ತ ಆಹಾರ ಪದಾರ್ಥಗಳನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ‘ನಮ್ಮ ರೈತ ಉತ್ಪಾದಕರ ಸಂಸ್ಥೆ’ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಬುಧವಾರ ರೈತ ಸಂತೆಗೆ ಚಾಲನೆ ನೀಡಲಾಯಿತು.

ಗಣ್ಯರು ಜ್ಯೋತಿ ಬೆಳಗಿಸಿ ಹಾಗೂ ಸಸಿಗೆ ನೀರುಣಿಸುವ ಮೂಲಕ ರೈತ ಸಂತೆಗೆ ಚಾಲನೆ ನೀಡಿದರು. ಪ್ರತಿ ಬುಧವಾರ ರೈತ ಸಂತೆ ನಡೆಸಲು ಉದ್ದೇಶಿಸಲಾಗಿದ್ದು, ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ವೇದಿಕೆ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರ ಪಿ. ಗಾದೆಪ್ಪ, ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವ ಇಂತಹ ಕಾರ್ಯಕ್ರಮ ಉತ್ತಮ ಹಾಗೂ ಅಗತ್ಯ ಪ್ರಯತ್ನವಾಗಿದೆ ಎಂದರು. ಆರಂಭದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾದರೂ ರೈತ ಸಂತೆಯ ನಿರಂತರತೆಗೆ ಪಾಲಿಕೆ ಅಗತ್ಯ ಸಹಕಾರ ನೀಡಲಿದೆ. ಸೂಕ್ತ ಸ್ಥಳ ಗುರುತಿಸಿ ವ್ಯವಸ್ಥೆ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮುಂದಿನ ಪೀಳಿಗೆಗೆ ಆರೋಗ್ಯಕರ ಬದುಕು ಕಲ್ಪಿಸಲು ವಿಷಮುಕ್ತ ಹಾಗೂ ಗುಣಮಟ್ಟದ ಆಹಾರಕ್ಕೆ ಆದ್ಯತೆ ನೀಡಬೇಕು. ರೈತರು ನೈಸರ್ಗಿಕ ಕೃಷಿಯತ್ತ ಹೆಚ್ಚಿನ ಒಲವು ತೋರಿಸುವುದರ ಜತೆಗೆ, ಸಾರ್ವಜನಿಕರು ಸ್ಥಳೀಯ ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ರೈತರು ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವುದರಿಂದ ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗಿ ರೈತರಿಗೆ ಉತ್ತಮ ಬೆಲೆ ಹಾಗೂ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳು ದೊರೆಯಲಿವೆ. ‘ವಿಷಮುಕ್ತ ಭೂಮಿ, ವಿಷಮುಕ್ತ ಆಹಾರದಿಂದ ಆರೋಗ್ಯವಂತ ಭಾರತ ನಿರ್ಮಾಣ’ ಎಂಬ ಆಶಯದೊಂದಿಗೆ ರೈತ ಸಂತೆ ಮುಂದುವರಿಯಬೇಕು ಎಂದು ಅವರು ತಿಳಿಸಿದರು.

ಸರ್ಕಾರಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ಸಂವಾದ ನಡೆಸಿದರು. ರೈತರು, ರೈತ ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಬಸವರಾಜ ಸ್ವಾಮಿ, ಕಲ್ಯಾಣ ಸ್ವಾಮಿ, ಮಲ್ಲಿಕಾರ್ಜುನ್ ಬಳ್ಳಾರಿ, ಶಶಿಕಾಂತ್, ರವಿ ಎಸ್., ಮಹೇಶ್ವರ ಸ್ವಾಮಿ, ಹೊನ್ನೂರ್, ಪ್ರಕಾಶ್, ಚುಕ್ಕಿ ನಂಜುಂಡ ಸ್ವಾಮಿ, ಗಣಪಲ್ ಏನಾಥ್ ರೆಡ್ಡಿ, ಡಿ.ಆರ್. ನಾಗಭೂಷಣ್, ವಿಶ್ವೇಶ್ವರ ಸಜ್ಜನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles