ಬೆಳಗಾಯಿತು ವಾರ್ತೆ
ಬಳ್ಳಾರಿ: ತುಂಗಭದ್ರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಎಚ್ಎಲ್ಸಿ ಹಾಗೂ ಎಲ್ಎಲ್ಸಿ ಕಾಲುವೆಗಳ ವ್ಯಾಪ್ತಿಯ ರೈತರ ಬೆಳೆಗಳಿಗೆ ಅಗತ್ಯ ಪ್ರಮಾಣದ ನೀರು ಪೂರೈಸಬೇಕು. ರೈತರಲ್ಲಿ ಉಂಟಾಗಿರುವ ನೀರಿನ ಆತಂಕ ನಿವಾರಿಸಲು ಬಳ್ಳಾರಿಯಲ್ಲಿ ತಕ್ಷಣ ತುರ್ತು ನೀರಾವರಿ ಸಭೆ ಕರೆಯಬೇಕು ಎಂದು ತುಂಗಭದ್ರ ರೈತ ಸಂಘದ ರಾಜ್ಯಾಧ್ಯಕ್ಷ ಡಾ. ದರೂರ್ ಪುರುಷೋತ್ತಮ್ ಗೌಡ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.11ರಂದು ನಡೆದ ತುಂಗಭದ್ರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯ ವೇಳೆ ಜಲಾಶಯದಲ್ಲಿ 82 ಟಿಎಂಸಿ ನೀರು ಸಂಗ್ರಹವಿದ್ದು, 30 ಸಾವಿರ ಕ್ಯೂಸೆಕ್ ಒಳಹರಿವು ಇತ್ತು. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ತುಂಗಭದ್ರ ನದಿ ಮತ್ತು ವಿವಿಧ ಕಾಲುವೆಗಳ ಮೂಲಕ ಪ್ರತಿದಿನ ಒಟ್ಟಾರೆ 9 ಸಾವಿರ ಕ್ಯೂಸೆಕ್ ನೀರು ಬಳಸುವ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು ಎಂದರು.
ನೀರಿನ ಕೊರತೆ ಹಿನ್ನೆಲೆಯಲ್ಲಿ ಈ ವರ್ಷ ಕಾರ್ಖಾನೆಗಳಿಗೆ ನೀರು ಪೂರೈಸದಿರಲು ನಿರ್ಧರಿಸಲಾಗಿತ್ತು. ಆದರೆ, ಸಭೆಯ ನಿರ್ಣಯದ ಹೊರತಾಗಿಯೂ ಕಾರ್ಖಾನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಕೆಯಾಗುತ್ತಿದೆ ಎಂಬ ಆರೋಪಗಳಿವೆ. ಪ್ರತಿದಿನ ಸರಾಸರಿ 10 ಸಾವಿರ ಕ್ಯೂಸೆಕ್ಗೂ ಅಧಿಕ ನೀರು ಬಳಕೆಯಾಗುತ್ತಿರುವುದರಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ ಎಂದು ಆರೋಪಿಸಿದರು.
ನೀರಾವರಿ ಸಲಹಾ ಸಮಿತಿಯ ನಿರ್ಣಯವನ್ನು ನಂಬಿ ರೈತರು ಬಿತ್ತನೆ ಹಾಗೂ ನಾಟಿ ಕಾರ್ಯ ಕೈಗೊಂಡಿದ್ದಾರೆ. ಇದೀಗ ಹಲವು ಬೆಳೆಗಳು ನಿರ್ಣಾಯಕ ಹಂತದಲ್ಲಿದ್ದು, ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ರೈತರು ಭಾರಿ ಆರ್ಥಿಕ ನಷ್ಟಕ್ಕೆ ಒಳಗಾಗಲಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳು ನೀರು ಸಾಲುವುದಿಲ್ಲ ಎಂಬ ಹೇಳಿಕೆ ನೀಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.
ಪ್ರಸ್ತುತ ತುಂಗಭದ್ರ ಜಲಾಶಯದಲ್ಲಿ ಸುಮಾರು 64.500 ಟಿಎಂಸಿ ನೀರು ಲಭ್ಯವಿದ್ದು, ನೀರನ್ನು ವೈಜ್ಞಾನಿಕವಾಗಿ ಹಾಗೂ ಸಮರ್ಪಕವಾಗಿ ನಿರ್ವಹಿಸಿದರೆ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರು ಒದಗಿಸುವುದರ ಜತೆಗೆ ಕುಡಿಯುವ ನೀರಿನ ಅಗತ್ಯವನ್ನೂ ಪೂರೈಸಬಹುದು. ಹೀಗಾಗಿ ನೀರಿನ ಬಳಕೆ ಮತ್ತು ಹಂಚಿಕೆಯಲ್ಲಿ ಕಟ್ಟುನಿಟ್ಟಿನ ನಿರ್ವಹಣೆ ಅಗತ್ಯ ಎಂದು ಹೇಳಿದರು.
ಬೆಳೆಗಳ ವಾಸ್ತವಿಕ ಸ್ಥಿತಿ ಪರಿಶೀಲನೆಗೆ ಆಗ್ರಹ
ಎಚ್ಎಲ್ಸಿ ಮತ್ತು ಎಲ್ಎಲ್ಸಿ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಬೆಳೆಗಳ ವಾಸ್ತವಿಕ ಸ್ಥಿತಿಯನ್ನು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕು. ಯಾವ ಪ್ರದೇಶಕ್ಕೆ ಎಷ್ಟು ನೀರು ಅಗತ್ಯವಿದೆ, ಲಭ್ಯವಿರುವ ನೀರಿನಲ್ಲಿ ಎಷ್ಟು ದಿನ ನೀರು ಹರಿಸಬಹುದು ಹಾಗೂ ಕಾಲುವೆಗಳಿಗೆ ನೀರು ಬಿಡುವ ವೇಳಾಪಟ್ಟಿ ಏನು ಎಂಬುದನ್ನು ರೈತರಿಗೆ ಸ್ಪಷ್ಟಪಡಿಸಬೇಕು ಎಂದು ದರೂರ್ ಪುರುಷೋತ್ತಮ್ ಗೌಡ ಆಗ್ರಹಿಸಿದರು.
ಬಳ್ಳಾರಿಯಲ್ಲಿ ತುರ್ತು ಸಭೆ ನಡೆಸಿ
ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಕ್ಷಣ ತುರ್ತು ನೀರಾವರಿ ಸಭೆ ನಡೆಸಬೇಕು. ಸಭೆಗೆ ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ, ತುಂಗಭದ್ರ ಜಲಾಶಯದ ಮುಖ್ಯ ಅಭಿಯಂತರರು, ತುಂಗಭದ್ರ ಮಂಡಳಿಯ ಅಧೀಕ್ಷಕ ಅಭಿಯಂತರರು, ಜಿಲ್ಲಾ ಪಂಚಾಯಿತಿ ಸಿಇಒ, ಕೃಷಿ, ಜಲಸಂಪನ್ಮೂಲ, ತೋಟಗಾರಿಕೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮತ್ತು ರೈತ ಸಂಘದ ಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಜಲಾಶಯದ ಪ್ರಸ್ತುತ ನೀರಿನ ಮಟ್ಟ, ಒಳಹರಿವು, ವಿವಿಧ ಬಳಕೆಗಳಿಗೆ ನಿಗದಿಪಡಿಸಿರುವ ನೀರಿನ ಪ್ರಮಾಣ, ಎಚ್ಎಲ್ಸಿ–ಎಲ್ಎಲ್ಸಿ ಕಾಲುವೆಗಳಿಗೆ ನೀರು ಹರಿಸುವ ವೇಳಾಪಟ್ಟಿ ಹಾಗೂ ಅಚ್ಚುಕಟ್ಟು ಪ್ರದೇಶದ ಬೆಳೆಗಳ ಅಗತ್ಯತೆ ಕುರಿತು ಸಮಗ್ರ ಚರ್ಚೆ ನಡೆಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದರು.
ಭದ್ರಾ ಮೇಲ್ದಂಡೆ ಯೋಜನೆಯ 29 ಟಿಎಂಸಿ ಕುರಿತು ಸ್ಪಷ್ಟನೆಗೆ ಆಗ್ರಹ
ಭದ್ರಾ ಮೇಲ್ದಂಡೆ ಯೋಜನೆಗಾಗಿ ಭದ್ರಾ ಹಾಗೂ ತುಂಗಾ ಜಲಾಶಯಗಳಿಂದ 29 ಟಿಎಂಸಿ ನೀರು ಬಳಸುತ್ತಿರುವ ವಿಚಾರದಲ್ಲೂ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಅವರು ಆಗ್ರಹಿಸಿದರು.
ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ನೀರು ಪೂರೈಸಲು 29 ಟಿಎಂಸಿ ನೀರು ಬಳಸುವುದರಿಂದ ತುಂಗಭದ್ರ ಜಲಾಶಯದ ನೀರಿನ ಲಭ್ಯತೆ ಮೇಲೆ ಉಂಟಾಗುವ ಪರಿಣಾಮವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇದರ ನೇರ ಪರಿಣಾಮ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳ ಮೇಲೆ ಬೀರದಂತೆ ಕ್ರಮ ಕೈಗೊಳ್ಳಬೇಕು ಎಂದರು.
“ರೈತರ ಬೆಳೆಗಳಿಗೆ ನೀರು ಸಾಲುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವಾಗಲೇ ವಿವಿಧ ಉದ್ದೇಶಗಳಿಗೆ ನೀರಿನ ಬಳಕೆ ನಡೆಯುತ್ತಿದೆ. ಈಗಾಗಲೇ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ರೈತರ ಹಿತವನ್ನು ಕಡೆಗಣಿಸಿ ಯಾವುದೇ ನೀರಿನ ಹಂಚಿಕೆ ನಿರ್ಧಾರ ಕೈಗೊಳ್ಳಬಾರದು” ಎಂದು ಹೇಳಿದರು.
ಸರ್ಕಾರ ಕೂಡಲೇ ರೈತರ ಬೆಳೆಗಳಿಗೆ ಅಗತ್ಯ ನೀರು ಪೂರೈಸುವ ಕುರಿತು ಸ್ಪಷ್ಟ ನಿರ್ಧಾರ ಕೈಗೊಂಡು ಬಳ್ಳಾರಿಯಲ್ಲಿ ತುರ್ತು ನೀರಾವರಿ ಸಭೆ ನಡೆಸಬೇಕು. ನೀರಿನ ಲಭ್ಯತೆ ಮತ್ತು ಹಂಚಿಕೆ ಕುರಿತು ರೈತರಿಗೆ ವಾಸ್ತವಾಂಶ ತಿಳಿಸಿ ಆತಂಕ ನಿವಾರಿಸಬೇಕು. ಇಲ್ಲವಾದರೆ ರೈತರೊಂದಿಗೆ ಸಮಾಲೋಚಿಸಿ ಮುಂದಿನ ಹೋರಾಟದ ರೂಪುರೇಷೆ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶಿವಯ್ಯ, ಶ್ರೀಧರ್ ಗೌಡ, ತಿಪ್ಪಾರೆಡ್ಡಿ, ರಾಮಕೃಷ್ಣ, ರುದ್ರಯ್ಯ, ಶ್ರೀನಿವಾಸ್, ಬಸವರಾಜ್, ಲಿಂಗಾರೆಡ್ಡಿ, ದರೂರ್ ಸಾಗರ್ ಗೌಡ ಸೇರಿದಂತೆ ತುಂಗಭದ್ರ ರೈತ ಸಂಘದ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.





