ಬೆಳಗಾಯಿತು ವಾರ್ತೆ
ಬಳ್ಳಾರಿ: ಬಿಜೆಪಿ ಪಾದಯಾತ್ರೆಯ ಸಮಾರಂಭ ಆಯೋಜಿಸಲು ಬಳ್ಳಾರಿಯ ಮುನಿಸಿಪಲ್ ಕಾಲೇಜು ಮೈದಾನ ನೀಡುವಂತೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ನಡೆಸಿದ ಪ್ರಯತ್ನಕ್ಕೆ ಸ್ಪಂದಿಸಿರುವ ಸರ್ಕಾರ, ಮೈದಾನ ನೀಡಲು ಅನುಮತಿ ನೀಡಿದೆ.
ಮೈದಾನ ನೀಡುವಂತೆ ಒತ್ತಾಯಿಸಿ ಇಂದು ಸಂಜೆ 4 ಗಂಟೆಗೆ ರಾಯಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ 1,000ಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಬಿಜೆಪಿ ಮುಖಂಡರು ನಿರ್ಧರಿಸಿದ್ದರು. ಆದರೆ, ಸರ್ಕಾರ ಮುನಿಸಿಪಲ್ ಕಾಲೇಜು ಮೈದಾನವನ್ನು ಪಾದಯಾತ್ರೆಯ ಸಮಾರಂಭಕ್ಕೆ ನೀಡಲು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ, ಇಂದು ನಡೆಯಬೇಕಿದ್ದ ಮೆರವಣಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಶಾಸಕ ಜನಾರ್ದನ ರೆಡ್ಡಿ, ಪಿ. ರಾಜೀವ್, ಪ್ರತಾಪ್ ಸಿಂಹ ಸೇರಿದಂತೆ ಹಲವು ಬಿಜೆಪಿ ನಾಯಕರು ಮುನಿಸಿಪಲ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿ, ಕಾರ್ಯಕ್ರಮದ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು.
ಮೈದಾನ ಲಭ್ಯವಾಗಿರುವುದರಿಂದ ಪಾದಯಾತ್ರೆಯ ಸಮಾರಂಭವನ್ನು ನಿಗದಿತ ರೀತಿಯಲ್ಲಿ ನಡೆಸಲು ಬಿಜೆಪಿ ಮುಖಂಡರು ಮುಂದಾಗಿದ್ದಾರೆ.





