ಪ್ರಜಾಸೇವೆ’ ಆಂದೋಲನ ಸಭೆಗೆ ಡಿಸಿ ಚಾಲನೆ:ಕಚೇರಿ ಅಲೆದಾಟ ತಪ್ಪಿಸಲು ‘ಪ್ರಜಾಸೇವೆ’ ಮನೆಬಾಗಿಲಿಗೆ

ಬೆಳಗಾಯಿತ ವಾರ್ತೆ
ಬಳ್ಳಾರಿ: ಸಾಮಾನ್ಯ ಜನರು ತಮ್ಮ ಸಣ್ಣಪುಟ್ಟ ಸಮಸ್ಯೆಗಳಿಗೂ ನಗರದ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ‘ಪ್ರಜಾಸೇವೆ’ ಆಂದೋಲನ ಮೂಲಕ ಇಡೀ ಜಿಲ್ಲಾಡಳಿತವೇ ಜನರ ಮನೆಬಾಗಿಲಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ಜಿಲ್ಲಾಡಳಿತ, ಬಳ್ಳಾರಿ ತಾಲೂಕು ಆಡಳಿತ ವತಿಯಿಂದ ‘ಬಾಗಿಲಿಗೆ ಬಂತು ಸರ್ಕಾರ- ಸೇವೆಗೆ ಇರಲಿ ಸಹಕಾರ’ ಎಂಬ ಆಶಯದೊಂದಿಗೆ ಬಳ್ಳಾರಿ ತಾಲೂಕಿನ ಸಿರಿವಾರ ಗ್ರಾಮ ಪಂಚಾಯತ್ ನ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ‘ಪ್ರಜಾಸೇವಾ ಆಂದೋಲನ ಸಭೆ’ ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರಿಂದ ಸ್ವೀಕರಿಸಲಾಗುವ ಅರ್ಜಿಗಳಲ್ಲಿ ಸಾಧ್ಯವಾದಷ್ಟು ಸ್ಥಳದಲ್ಲೇ ಇತ್ಯರ್ಥಪಡಿಸಲಾಗುವುದು. ಹೆಚ್ಚಿನ ಪರಿಶೀಲನೆ ಅಗತ್ಯವಿರುವ ಅರ್ಜಿಗಳಿಗೆ ಕಾಲಮಿತಿ ನಿಗದಿಪಡಿಸಿ, ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಶೀಘ್ರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಪ್ರಜಾಸೇವೆ ಆಂದೋಲನ’ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ಸಲ್ಲಿಸುವ ಯಾವುದೇ ಅರ್ಜಿಗಳು ಕಣ್ಮರೆಯಾಗದಂತೆ ನಿಗಾ ವಹಿಸಲು ‘ಐಪಿಜಿಆರ್‌ಎಸ್’ ಪೋರ್ಟಲ್‌ನಲ್ಲಿ ಪ್ರತಿಯೊಂದು ಅರ್ಜಿಯ ವಿವರಗಳನ್ನು ದಾಖಲಿಸಲಾಗುವುದು. ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಸ್ವೀಕೃತಿ ರಶೀದಿ ನೀಡಲಾಗುತ್ತಿದ್ದು, ಸಾರ್ವಜನಿಕರು ತಮ್ಮ ಅರ್ಜಿಯ ಪ್ರಗತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ ಎಂದರು.

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ನಿಯಮಾನುಸಾರ ಕೇವಲ ಅಧಿಕಾರಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ನಾಗರಿಕರು ಸಂಯಮದಿಂದ ತಮ್ಮ ಅಹವಾಲುಗಳನ್ನು ಸಲ್ಲಿಸಬೇಕು, ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲು ಸಂಪೂರ್ಣ ಜಿಲ್ಲಾಡಳಿತ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಕಂದಾಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಎಲ್ಲಾ ಪ್ರಮುಖ ಇಲಾಖೆಗಳ ಪ್ರತ್ಯೇಕ ಮಳಿಗೆಗಳನ್ನು ತೆರೆಯಲಾಗಿತ್ತು. ಗ್ರಾಮಸ್ಥರು ಮುಖ್ಯವಾಗಿ ವೃದ್ಧಾಪ್ಯ ಮತ್ತು ವಿಧವಾ ಪಿಂಚಣಿ ಮಂಜೂರಾತಿ, ಗೃಹಲಕ್ಷ್ಮಿ ಯೋಜನೆ, ವಸತಿ ಸೌಲಭ್ಯ ಒದಗಿಸುವುದು ಹಾಗೂ ಸಿರಿವಾರ ಗ್ರಾಮದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ನೇರವಾಗಿ ಅರ್ಜಿಗಳನ್ನು ಸಲ್ಲಿಸಿದರು.

ಅರ್ಜಿಗಳನ್ನು ಸ್ವೀಕರಿಸಿದ ಅಧಿಕಾರಿಗಳು, ಪ್ರತಿಯೊಂದು ಅಹವಾಲನ್ನು ಪರಿಶೀಲಿಸಿ ನಿಯಮಾನುಸಾರ ಹಾಗೂ ನಿಗದಿತ ಕಾಲಮಿತಿಯೊಳಗೆ ಸೂಕ್ತ ಕ್ರಮ ಕೈಗೊಂಡು ಇತ್ಯರ್ಥಪಡಿಸುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಿದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಸಿರುಗುಪ್ಪ ಉಪವಿಭಾಗದ ಡಿವೈಎಸ್ಪಿ ಮಹಾಂತೇಶ್, ಭೂದಾಖಲೆ ಇಲಾಖೆಯ ಉಪನಿರ್ದೇಶಕ ಪ್ರಮೋದ್, ಬಳ್ಳಾರಿ ತಾಲೂಕು ತಹಶೀಲ್ದಾರರಾದ ಟಿ.ರೇಖಾ, ತಾಪಂ ಇಓ ಶ್ರೀಧರ್ ಬಾರಿಕರ, ಸಿರಿವಾರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮಲತಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ- ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles