ಬಳ್ಳಾರಿಯ ಶ್ರೀ ಸಣ್ಣದುರ್ಗಮ್ ದೇವಸ್ಥಾನದಲ್ಲಿ ಅ.11ರಿಂದ ದಸರಾ ಶರನ್ನವರಾತ್ರಿ ಉತ್ಸವ



ಒಂಬತ್ತು ದಿನಗಳ ಕಾಲ ವಿವಿಧ ದೇವಿ ಅಲಂಕಾರ, ಹೋಮ-ಹವನ, ಚಂಡಿಯಾಗ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು
ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದ ಪಟೇಲ್ ನಗರದ ಹದ್ದಿನಗುಂಡು ರಸ್ತೆಯ ದುರ್ಗಾ ಕಾಲೋನಿಯಲ್ಲಿರುವ ಶ್ರೀ ಸಣ್ಣದುರ್ಗಮ್ಮ ದೇವಸ್ಥಾನದಲ್ಲಿ 11ನೇ ವರ್ಷದ ದಸರಾ ಶರನ್ನವರಾತ್ರಿ ವೈಭವದ ಉತ್ಸವಗಳು ಅ.11ರಿಂದ ಅ.20ರವರೆಗೆ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿವೆ
ಎಂದು ದೇವಸ್ಥಾನದ ಅಧ್ಯಕ್ಷರಾದ ಮೀನಳ್ಳಿ ತಾಯಣ್ಣ ಅವರು ಹೇಳಿದರು.

ನಗರದ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,
ಉತ್ಸವದ ಅಂಗವಾಗಿ ಶ್ರೀ ಸಣ್ಣದುರ್ಗಮ್ಮ ದೇವಿಗೆ ಪ್ರತಿದಿನ ವಿಶೇಷ ಅಲಂಕಾರ, ಅಭಿಷೇಕ, ಎಲೆ ಪೂಜೆ, ಶ್ರೀಚಕ್ರ ಸಹಿತ ಕುಂಕುಮಾರ್ಚನೆ ಹಾಗೂ ವಿವಿಧ ಹೋಮ-ಹವನಗಳನ್ನು ಆಯೋಜಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 5.30ರಿಂದ ವಿಶೇಷ ಪೂಜೆಗಳು ನಡೆಯಲಿದ್ದು, ಸಂಜೆ 3.30ರಿಂದ ನಿತ್ಯ ಹೋಮಗಳು ಜರುಗಲಿವೆ. ಹೋಮ ಕಾರ್ಯಕ್ರಮದಲ್ಲಿ ದಂಪತಿಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ಆಸಕ್ತರು ಮುಂಚಿತವಾಗಿ ಹೆಸರು ಮತ್ತು ದಿನಾಂಕ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ದಿನವಾರು ಧಾರ್ಮಿಕ ಕಾರ್ಯಕ್ರಮಗಳು
ಅ.11ರಂದು ಭಾನುವಾರ ಶ್ರೀ ಬಾಲ ತ್ರಿಪುರ ಸುಂದರಿ ದೇವಿ ಅಲಂಕಾರ ಹಾಗೂ ಸಹಸ್ರ ಮೋದಕ ಶ್ರೀ ಲಕ್ಷ್ಮೀಗಣಪತಿ ಹೋಮ ನಡೆಯಲಿದೆ. ಅ.12ರಂದು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಅಲಂಕಾರ ಮತ್ತು ಹೋಮ, ಅ.13ರಂದು ಶ್ರೀ ಲಲಿತಾ ದೇವಿ ಅಲಂಕಾರ ಹಾಗೂ ಲಲಿತಾ ಸಹಸ್ರನಾಮ ಸಹಿತ ಹೋಮ, ಅ.14ರಂದು ಶ್ರೀ ವಾರಾಹಿ ದೇವಿ ಅಲಂಕಾರ ಮತ್ತು ಮೇಧಾ ದಕ್ಷಿಣಾಮೂರ್ತಿ ಹೋಮ ಜರುಗಲಿವೆ.
ಅ.15ರಂದು ಶ್ರೀ ಅನ್ನಪೂರ್ಣೇಶ್ವರಿ ದೇವಿ ಅಲಂಕಾರ ಹಾಗೂ ಆದಿತ್ಯಾದಿ ನವಗ್ರಹ ಹೋಮ, ಅ.16ರಂದು ಶ್ರೀ ಮಹಾಲಕ್ಷ್ಮೀ ದೇವಿ ಅಲಂಕಾರ ಮತ್ತು ಹೋಮ, ಅ.17ರಂದು ಶ್ರೀ ಸರಸ್ವತಿ ದೇವಿ ಅಲಂಕಾರ ಹಾಗೂ ಹೋಮ ನಡೆಯಲಿವೆ. ಅಂದು ಬೆಳಿಗ್ಗೆ 9 ಗಂಟೆಗೆ ಮಕ್ಕಳಿಗಾಗಿ ವಿಶೇಷ ಸರಸ್ವತಿ ದೇವಿ ಪೂಜೆ ಆಯೋಜಿಸಲಾಗಿದೆ.
ಅ.18ರಂದು ಭಾನುವಾರ ಶ್ರೀ ದುರ್ಗಾದೇವಿ ಅಲಂಕಾರ, ಲಕ್ಷ ಕುಂಕುಮಾರ್ಚನೆ, ಚಂಡಿಯಾಗ ಹಾಗೂ ಮಹಾಪೂರ್ಣಾಹುತಿ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಅನ್ನಪ್ರಸಾದ ವಿತರಣೆ ಮಾಡಲಾಗುತ್ತದೆ. ಅ.19ರಂದು ಶ್ರೀ ಚಂಡೀ ದೇವಿ ಅಲಂಕಾರ ಹಾಗೂ ಸಂಜೆ 3 ಗಂಟೆಗೆ ಅಮ್ಮನವರಿಂದ ಬನ್ನಿ ಮುಡಿಸುವ ಕಾರ್ಯಕ್ರಮ ಜರುಗಲಿದೆ. ಅ.20ರಂದು ವಿಜಯದಶಮಿಯಂದು ಅಮ್ಮನವರ ನಿಜರೂಪದ ಅಲಂಕಾರ ಮಾಡಲಾಗುತ್ತದೆ. ಸಂಜೆ 3 ಗಂಟೆಗೆ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಬನ್ನಿ ಮುಡಿಸುವ ಕಾರ್ಯಕ್ರಮ ನಡೆಯಲಿದೆ.
ಪ್ರತಿದಿನ ಪಾರಾಯಣ, ಸಾಂಸ್ಕೃತಿಕ ಕಾರ್ಯಕ್ರಮ
ಪ್ರತಿದಿನ ಸಂಜೆ 4ರಿಂದ 6ರವರೆಗೆ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ 8.30ಕ್ಕೆ ಮಹಾಮಂಗಳಾರತಿ ನಡೆಯಲಿವೆ. ರಾತ್ರಿ 9 ಗಂಟೆಗೆ ವಿಶೇಷ ಪಂಚಾಮೃತ ಕಾರ್ಯಕ್ರಮವೂ ಇರಲಿದೆ.
ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನು, ಮನ, ಧನ ಹಾಗೂ ದವಸ-ಧಾನ್ಯಗಳ ಮೂಲಕ ಸಹಕರಿಸಿ ರಸೀದಿ ಪಡೆಯಬೇಕು. ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಮ್ಮನವರ ಆಶೀರ್ವಾದ ಪಡೆಯುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ.
ದೇವಸ್ಥಾನದ ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿದ ಮತ್ತು ಸಹಕರಿಸುತ್ತಿರುವ ಎಲ್ಲ ಭಕ್ತಾದಿಗಳಿಗೆ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಸಿ.ಎಸ್. ಸತ್ಯನಾರಾಯಣ, ಕೆ. ಹನುಮಂತಪ್ಪ, ತಿಪ್ಪಣ್ಣ,ಯರಿಸ್ವಾಮಿ ಸೇರಿದಂತೆ ಟ್ರಸ್ಟ್ ಸದಸ್ಯರು ಹಾಜರಿದ್ದರು.




Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles