ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: 2024-25ನೇ ಸಾಲಿಗೆ 45,237.55ಲಕ್ಷ ರೂ. ಗ್ರಾತದ ಮಹಾನಗರ ಪಾಲಿಕೆ ಬಜೆಟ್‌ನ್ನು ಮೇಯರ್ ಶ್ವೇತಾ ಬಿ. ಗುರುವಾರ ಮಂಡಿಸಿದರು. ಮೇಯರ್ ಆದ ನಂತರ ಮಂಡಿಸಿದ ಮೊದಲ ಬಜೆಟ್ ಇದಾಗಿದೆ.
ನಗರದ ಜಿಪಂ ನಜೀರ್ ಸಾಬ್ ಸಭಾಂಗಣದಲ್ಲಿ ಗುರುವಾರ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಶ್ವೇತಾ ಅವರು ಮಂಡಿಸಿದ ಮೊದಲ ಬಜೆಟ್ ವಿವರ ಇಂತಿದೆ. ಆರಂಭ ಶುಲ್ಕ 13,761.82ಲಕ್ಷ ರೂ., ಆದಾಯ 31,475.73 ಲಕ್ಷ ರೂ., ಪಾಲಿಕೆ ಬಜೆಟ್ ಗ್ರಾತ ಒಟ್ಟು 45,237.55 ಲಕ್ಷ ರೂ. ಬಜೆಟ್ ಮಂಡಿಸಿದರು. ಇದರಲ್ಲಿ ನಾನಾ ವೆಚ್ಚಗಳಿಗೆ 33,868.23 ಲಕ್ಷ ರೂ. ಕಳೆದ ಬಳಿಕ 11,369.32 ಲಕ್ಷ ರೂ. ಉಳಿತಾಯ ಅಂದಾಜಿಸಲಾಗಿದೆ.
ಯಾವುದಕ್ಕೆ ಎಷ್ಟು?: ಉದ್ಯಾನಗಳ ಅಭಿವೃದ್ಧಿಗೆ 1 ಕೋಟಿ ರೂ., ಪಾಲಿಕೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಕಾರಿ ಮತ್ತು ದುರಸ್ತಿಗೆ 4.75 ಕೋಟಿ ರೂ., ಪೌರ ಕಾರ್ಮಿಕರ ಬೆಳಗಿನ ಉಪಾಹಾರ, ಆರೋಗ್ಯ ಭದ್ರತೆ ಮತ್ತು ರಜಾ ಪರಿಹಾರಕ್ಕಾಗಿ ಅಂದಾಜು 2.35 ಕೋಟಿ ರೂ., ತುರ್ತು ಸಂದರ್ಭಗಳಿಗಾಗಿ 90 ಲಕ್ಷ ರೂ., ನೀರು ಸರಬರಾಜು ಮತ್ತು ಒಳಚರಂಡಿ ಸಂಪರ್ಕಕ್ಕೆ 13.7 ಕೋಟಿ ರೂ., ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಪ್ರೋತ್ಸಾಹಕ್ಕಾಗಿ 20 ಲಕ್ಷ ರೂ., ವಿದ್ಯುತ್ ದೀಪಗಳ ಅಳವಡಿಕೆ ಹಾಗೂ ನಿರ್ವಹಣೆಗೆ 2.15 ಕೋಟಿ ರೂ., ವಿದ್ಯಾರ್ಥಿಗಳ ಪೋತ್ಸಾಹಧನಕ್ಕೆ 5 ಲಕ್ಷ ರೂ., ಶೌಚಾಲಯ ನಿರ್ವಹಣೆಗೆ 2 ಕೋಟಿ ರೂ., ಸ್ಮಶಾನ ಅಭಿವೃದ್ಧಿಗೆ 4.55 ಕೋಟಿ ರೂ., ನಗರ ಹಸಿರೀಕರಣಕ್ಕಾಗಿ 2 ಕೋಟಿ ರೂ., ಪುನರ್ವಸತಿ ಕೇಂದ್ರಗಳ ನಿರ್ವಹಣೆಗೆ 47.12 ಲಕ್ಷ ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಲ್ಯಾಣಕ್ಕಾಗಿ, ವಿಕಲಚೇತರ, ನಗರ ಇತರೆ ಬಡಜನರ ಯೋಜನೆಗೆ 2.16 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ.
ಉಚಿತ ಆರೋಗ್ಯ ಶಿಬಿರ: ಪಾಲಿಕೆಯಿಂದ ಉಚಿತ ವೈದ್ಯಕೀಯ ಶಿಬಿರ ಆಯೋಜಿಸಲು 35 ಲಕ್ಷ ರೂ., ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆಗಾಗಿ 50 ಲಕ್ಷ ರೂ. ಕಾಯ್ದಿರಿಸಲಾಗಿದೆ.
ಹೊಸ ಯೋಜನೆಗಳು: ನಗರದಲ್ಲಿ ಮಾದರಿ ಆಟೊ ನಿಲ್ದಾಣಗಳ ಅಭಿವೃದ್ಧಿಗೆ 30 ಲಕ್ಷ ರೂ., ನಗರದ ಪ್ರಮುಖ ರಸ್ತೆ ಮತ್ತು ಉಪ ರಸ್ತೆಗಳಿಗೆ ನಾಮಫಲಕ ಅಳವಡಿಸಲು 75 ಲಕ್ಷ ರೂ., ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ 1 ಕೋಟಿ ರೂ., ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಭೂ ಸ್ವಾಧೀನಕ್ಕಾಗಿ 50 ಲಕ್ಷ ರೂ. ಕಾಯ್ದಿರಿಸಲಾಗಿದೆ. ವಾರ್ಡ್ಗಳ ಅಭಿವೃದ್ಧಿ ಮತ್ತು ಸ್ವಚ್ಛತೆ ಕಾಪಾಡುವಲ್ಲಿ ಅತಿ ಹೆಚ್ಚು ಪ್ರಗತಿ ಸಾಧಿಸುವ ಮೊದಲ 3 ವಾರ್ಡ್ಗಳಿಗೆ 50 ಲಕ್ಷ ರೂ. ಅನುದಾನ ಹೆಚ್ಚುವರಿಯಾಗಿ ನೀಡಲಾಗುವುದು ಎಂದು ತಿಳಿಸಿದರು.