ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ:09-ಬಳ್ಳಾರಿ (ಪ.ಪಂ) ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಇದೇ ಮೇ 07 ರಂದು ಮಂಗಳವಾರ ಮತದಾನ ನಡೆಯಲಿದೆ. ಈ ಹಿನ್ನಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು, ಮತದಾರರನ್ನು ಆಕರ್ಷಿಸಲು ಜಿಲ್ಲೆಯಾದ್ಯಂತ 50 ವಿಶೇಷ ಮತಗಟ್ಟೆ ಕೇಂದ್ರಗಳನ್ನು ವಿವಿಧ ಮಾದರಿಗಳಲ್ಲಿ ಸಿಂಗಾರಗೊಳಿಸಿದ್ದು, ಅಲಂಕೃತ ಮತಗಟ್ಟೆಗಳು ಮತದಾರರನ್ನು ಕೈ ಬೀಸಿ ಕರೆಯುತ್ತಿವೆ.
ಪ್ರಜಾಪ್ರಭುತ್ವದ ಹಬ್ಬ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ವಿಶೇಷ ವಿನ್ಯಾಸದಲ್ಲಿ ಸಖಿ ಮತಗಟ್ಟೆ, ವಿಶೇಷ ಚೇತನರ ಮಾದರಿ ಮತಗಟ್ಟೆ, ಯುವ ಮತಗಟ್ಟೆ, ಸಾಂಪ್ರದಾಯಿಕ ಮತಗಟ್ಟೆ ಹಾಗೂ ವಿಷಯಾಧಾರಿತ (ಥೀಮ್) ಮತಗಟ್ಟೆಗಳು ಸಿಂಗಾರಗೊಂಡು ಕಂಗೊಳಿಸುತ್ತಿವೆ.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ 50 ವಿಶೇಷ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಮಹಿಳಾ ಮತದಾರರನ್ನು ಉತ್ತೇಜಿಸಲು ಪ್ರತಿ ವಿಧಾನಸಭಾ ಕ್ಷೇತ್ರವಾರು, ಮಹಿಳಾ ಮತದಾರರು ಹೆಚ್ಚಿರುವ ಕಡೆ 5 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಬಹುತೇಕ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಚುನಾವಣಾ ಕಾರ್ಯ ನಿರ್ವಹಿಸುವರು. ಇದೇ ಮಾದರಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ರಂತೆ ವಿಶೇಷ ಚೇತನರ ಮತಗಟ್ಟೆ, ಯುವ ಮತಗಟ್ಟೆ, ವಿಷಯಾಧಾರಿತ (ಸ್ಥಳೀಯ ಇತಿಹಾಸ, ಪರಂಪರೆ, ಸಂಸ್ಕøತಿ ಬಿಂಬಿಸುವ) ಮತಗಟ್ಟೆ ಹಾಗೂ 2 ರಂತೆ ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.





