ಅಪಘಾತ ತಡೆಗೆ ಹೆಲ್ಮೆಟ್ ಧರಿಸುವಂತೆ ಜಾಗೃತಿ


ಅಂಬೇಡ್ಕರ್ ಸೇವಾ ಸಮಿತಿಯಿಂದ 100 ಹೆಲ್ಮೆಟ್ ವಿತರಣೆ
ಬೆಳಗಾಯಿತು ವಾರ್ತೆ
ಬಳ್ಳಾರಿ:
ನಗರದಲ್ಲಿ ನ.2ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ, ರಸ್ತೆ ಅಪಘಾತಗಳಿಂದ ಸಂಭವಿಸುವ ಜೀವಹಾನಿ ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ 100 ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ಶನಿವಾರ ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪನ್ನೆಕರ್ ಅವರು ಹೆಲ್ಮೆಟ್ ವಿತರಿಸುವ ಮೂಲಕ ಚಾಲನೆ ನೀಡಿದರು.
ಇದೆ ವೇಳೆ ಎಸ್ಪಿ ಅವರು ಮಾತನಾಡಿದ ಅವರು, ರಸ್ತೆ ಅಪಘಾತಗಳಲ್ಲಿ ಪ್ರತಿವರ್ಷ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಅದರಲ್ಲೂ ದ್ವಿಚಕ್ರ ವಾಹನ ಸವಾರರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿದ್ದಾರೆ. ಸುಮಾರು ಶೇ.80ರಷ್ಟು ಸಾವುಗಳು ದ್ವಿಚಕ್ರ ವಾಹನ ಸವಾರರಿಗೆ ಸಂಬಂಧಿಸಿವೆ. ನಾಲ್ಕು ಜಿಲ್ಲೆಗಳ ಅಪಘಾತ ಅಂಕಿಅಂಶಗಳನ್ನು ಗಮನಿಸಿದರೆ ವರ್ಷಕ್ಕೆ ಸುಮಾರು 600ಕ್ಕೂ ಹೆಚ್ಚು ಜೀವಗಳು ರಸ್ತೆ ಅಪಘಾತಗಳಲ್ಲಿ ಬಲಿಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಹೆಲ್ಮೆಟ್ ನಿಯಮವನ್ನು ಕೇವಲ ಪೊಲೀಸ್ ಇಲಾಖೆಯ ಬಲವಂತದ ಕ್ರಮವಾಗಿ ನೋಡದೆ, ಪ್ರತಿಯೊಬ್ಬರೂ ತಮ್ಮ ಜೀವದ ಸುರಕ್ಷತೆಗಾಗಿ ಸ್ವಯಂಪ್ರೇರಣೆಯಿಂದ ಹೆಲ್ಮೆಟ್ ಧರಿಸಬೇಕು. ಯಾವ ಸಂದರ್ಭದಲ್ಲಿ ಅಪಘಾತ ಸಂಭವಿಸುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಆದ್ದರಿಂದ ವಾಹನ ಚಲಾಯಿಸುವಾಗ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ಅಂಬೇಡ್ಕರ್ ಸೇವಾ ಸಮಿತಿಯವರು ತೋರಿರುವ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದ್ದು, ಇದೇ ರೀತಿಯಲ್ಲಿ ಇತರೆ ಸಂಘ-ಸಂಸ್ಥೆಗಳು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಕೂಡ ರಸ್ತೆ ಸುರಕ್ಷತಾ ಅಭಿಯಾನಕ್ಕೆ ಕೈಜೋಡಿಸಬೇಕು. ಪೊಲೀಸ್ ಇಲಾಖೆ ಸಾರ್ವಜನಿಕರ ಸಹಕಾರದೊಂದಿಗೆ ಅಪಘಾತ ಮತ್ತು ಜೀವಹಾನಿ ತಡೆಗಟ್ಟಲು ಮುಂದಾಗಿದೆ ಎಂದು ಹೇಳಿದರು.


ಅಂಬೇಡ್ಕರ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಅವರು ಮಾತನಾಡಿ, ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಕೆ.ಎಂ. ಸಂದೇಶ ಅವರ ಜನ್ಮದಿನದ ಅಂಗವಾಗಿ ನ.7ರಂದು ಈ ಸಾಮಾಜಿಕ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಅನೇಕ ಕುಟುಂಬಗಳು ತಮ್ಮವರನ್ನು ಕಳೆದುಕೊಂಡು ಸಂಕಷ್ಟ ಎದುರಿಸುತ್ತಿವೆ. ಜನ್ಮದಿನದಂದು ಕೇಕ್ ಕತ್ತರಿಸುವುದು, ಊಟ ವಿತರಿಸುವುದರ ಬದಲಾಗಿ ಜನರ ಜೀವ ರಕ್ಷಣೆಗೆ ನೆರವಾಗುವ ಉದ್ದೇಶದಿಂದ 100 ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ. ಸಮಿತಿಯ ನಗರಾಧ್ಯಕ್ಷ ಗಿರಿಶಂಕರ್ ಅವರ ಸಲಹೆ ಹಾಗೂ ಪದಾಧಿಕಾರಿಗಳ ಸಹಕಾರದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದ ಅವರು, ಸಾರ್ವಜನಿಕರಲ್ಲಿ ಹೆಲ್ಮೆಟ್ ಧರಿಸುವ ಅಭ್ಯಾಸ ಬೆಳೆಸುವ ಮೂಲಕ ಅಪಘಾತದ ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಾಣಾಪಾಯವನ್ನು ಕಡಿಮೆ ಮಾಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಯುವ ಘಟಕ ಜಿಲ್ಲಾ ಅಧ್ಯಕ್ಷ ಆನಂದ್, ನಗರ ಅಧ್ಯಕ್ಷ ಮುತ್ತುರಾಜ್, ಉಪಾಧ್ಯಕ್ಷ ಡಿ.ಶಂಕರ್, ಅಶೋಕ, ವೀರೇಶ್, ಶಿವು ಸಂಗನಕಲ್ಲು, ರಮೇಶ್. ಕೆ, ಹುಲಗಪ್ಪ, ಚಂದ್ರಶೇಖರ, ರವಿಕಿರಣ್ ಸೇರಿದಂತೆ ಇತರರು ಹಾಜರಿದ್ದರು.



Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles