ಹತ್ತು ದಿನಗಳ ಕಾಲ ವಿಶೇಷ ಅಲಂಕಾರ, ಪುರಾಣ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅಖಂಡ ಭಜನೆ
ಬಳ್ಳಾರಿ: ನಗರದ ಶ್ರೀ ಕನಕದುರ್ಗಮ್ಮ ದೇವಸ್ಥಾನದಲ್ಲಿ 2026ನೇ ಸಾಲಿನ ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಅ.11ರಿಂದ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ದಸರಾ ಮಹೋತ್ಸವದ ಅಂಗವಾಗಿ ಪ್ರತಿದಿನ ಅಮ್ಮನವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡಲಾಗುತ್ತದೆ. ಪ್ರತಿದಿನ ಸಂಜೆ ಪುರಾಣ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬಳಿಕ ಸ್ಥಳೀಯ ಕಲಾವಿದರು, ಭಕ್ತಾದಿಗಳು ಹಾಗೂ ಅವರ ಮಕ್ಕಳು ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
ಅಖಂಡ ಭಜನಾ ಕಾರ್ಯಕ್ರಮ
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಬಳ್ಳಾರಿ ಕನಕದುರ್ಗಮ್ಮ ದೇವಸ್ಥಾನದ ಭಜನಾ ಮಂಡಳಿ ವತಿಯಿಂದ ಅಖಂಡ ಭಜನಾ ಕಾರ್ಯಕ್ರಮ ನಡೆಯಲಿದೆ. ಸುತ್ತಮುತ್ತಲಿನ ಸುಮಾರು 20ರಿಂದ 30 ಗ್ರಾಮಗಳ ಭಜನಾ ತಂಡಗಳು ಪಾಲ್ಗೊಳ್ಳಲಿದ್ದು, ರಾತ್ರಿ 9.30ಕ್ಕೆ ಆರಂಭವಾಗುವ ಭಜನಾ ಕಾರ್ಯಕ್ರಮ ಬೆಳಗಿನ ಜಾವ 5 ಗಂಟೆಯವರೆಗೆ ನಿರಂತರವಾಗಿ ನಡೆಯಲಿದೆ.
ಐದು ದಿನ ಬಂಗಾರದ ಆಭರಣದ ಅಲಂಕಾರ
ಅ.18ರಿಂದ 21ರವರೆಗೆ ಸೇರಿದಂತೆ ಐದು ದಿನಗಳ ಕಾಲ ಅಮ್ಮನವರಿಗೆ ಬಂಗಾರದ ಆಭರಣಗಳಿಂದ ವಿಶೇಷ ಅಲಂಕಾರ ನೆರವೇರಿಸಲಾಗುವುದು ಎಂದು ದೇವಸ್ಥಾನದವರು ತಿಳಿಸಿದ್ದಾರೆ. ದಸರಾ ಮಹೋತ್ಸವದ ಅಂಗವಾಗಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದೆ. ನಗರದ ಎಸ್‌ಪಿ ವೃತ್ತದಿಂದ ರಾಯಲ್ ವೃತ್ತದವರೆಗಿನ ಪ್ರದೇಶದಲ್ಲಿಯೂ ದೀಪಾಲಂಕಾರ ವ್ಯವಸ್ಥೆ ಮಾಡಿರುವುದು ಭಕ್ತರ ಗಮನ ಸೆಳೆಯಲಿದೆ.
ಭಕ್ತರಿಗೆ ಉಚಿತ ದರ್ಶನದ ವ್ಯವಸ್ಥೆ
ದಸರಾ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಭಕ್ತರಿಗೆ ಉಚಿತ ದರ್ಶನಕ್ಕಾಗಿ ಮೂರು ಪ್ರತ್ಯೇಕ ಸರತಿ ಸಾಲುಗಳ ವ್ಯವಸ್ಥೆ ಮಾಡಲಾಗಿದ್ದು, ವಿಐಪಿಗಳು ಹಾಗೂ ವಿಶೇಷ ಪೂಜೆ ಸಲ್ಲಿಸುವ ಭಕ್ತರಿಗೆ ಪ್ರತ್ಯೇಕ ಸರತಿ ಸಾಲು ಇರಲಿದೆ.
ದೇವಸ್ಥಾನದ ಒಳಭಾಗದಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ನೆಲದ ಮೇಲೆ ಮ್ಯಾಟ್‌ಗಳ ಅಳವಡಿಕೆ ಹಾಗೂ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯ ಸಹಕಾರವನ್ನೂ ಪಡೆಯಲಾಗಿದ್ದು, ಮಹಿಳಾ ಮತ್ತು ಪುರುಷ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.
ಬೆಳಗಿನ ಜಾವ 3 ಗಂಟೆಯಿಂದ ದರ್ಶನ
ದಸರಾ ಹಬ್ಬ ಮಹಿಳಾ ಭಕ್ತರಿಗೆ ವಿಶೇಷ ಮಹತ್ವ ಹೊಂದಿದ್ದು, ಬನ್ನಿ ಪೂಜೆ ಹಾಗೂ ಇತರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಅಮ್ಮನವರ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಬೆಳಗಿನ ಜಾವ 3 ಗಂಟೆಯಿಂದಲೇ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಹತ್ತು ದಿನಗಳ ದಸರಾ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಅಮ್ಮನವರ ದರ್ಶನ ಪಡೆದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ದೇವಸ್ಥಾನದವರು ಮನವಿ ಮಾಡಿದ್ದಾರೆ.





