ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದ ಹಳೆಯ ನ್ಯಾಯಾಲಯ ಸಂಕೀರ್ಣದಲ್ಲಿ ನೂತನವಾಗಿ ಕಾನೂನು ವಿದ್ಯಾಲಯ ಸ್ಥಾಪಿಸಲು ಅನುಮತಿ ನೀಡುವ ಕುರಿತು ಸರ್ಕಾರದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಕ್ರಮ ಕೈಗೊಂಡಿದೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಅವರು ಆಗಸ್ಟ್ 23ರಂದು ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ರವಾನಿಸಲಾಗಿದೆ.
ಪ್ರಸ್ತುತ ಸರ್ಕಾರದ ವಶದಲ್ಲಿರುವ ಬಳ್ಳಾರಿ ನಗರದ ಹಳೆಯ ನ್ಯಾಯಾಲಯ ಸಂಕೀರ್ಣದಲ್ಲಿ ಕಾನೂನು ವಿದ್ಯಾಲಯ ಆರಂಭಿಸಲು ಅನುಮತಿ ನೀಡುವ ಸಾಧ್ಯತೆ ಕುರಿತು ಪರಿಶೀಲಿಸುವಂತೆ ಪತ್ರದಲ್ಲಿ ಸೂಚಿಸಲಾಗಿದೆ. ಅಲ್ಲದೆ, ಈ ಕುರಿತು ವಿಶ್ವವಿದ್ಯಾಲಯದ ಅಭಿಪ್ರಾಯದೊಂದಿಗೆ ಸೂಕ್ತ ಪ್ರಸ್ತಾವನೆಯನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸುವಂತೆ ಕೋರಲಾಗಿದೆ.
ಬಳ್ಳಾರಿಯಲ್ಲಿ ಕಾನೂನು ವಿದ್ಯಾಲಯ ಸ್ಥಾಪನೆಯಾದರೆ, ಸ್ಥಳೀಯ ವಿದ್ಯಾರ್ಥಿಗಳಿಗೆ ಕಾನೂನು ಶಿಕ್ಷಣ ಪಡೆಯಲು ಅನುಕೂಲವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.





