ಗ್ರಾಹಕರು ಎಷ್ಟು ಮುಖ್ಯವೋ ಹಾಲು ಉತ್ಪಾದಕರೂ ಅಷ್ಟೇ ಮುಖ್ಯ; ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಶೀಘ್ರ
ಬೆಳಗಾಯಿತು ವಾರ್ತೆ
ಬಳ್ಳಾರಿ: ಹಾಲು ಉತ್ಪಾದಕರನ್ನು ಉಳಿಸಿ ಅವರ ಹಿತ ಕಾಪಾಡುವ ದೃಷ್ಟಿಯಿಂದ ಹಾಲಿನ ದರ ಏರಿಕೆ ಅನಿವಾರ್ಯವಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.
ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಬುಧವಾರ ತೊಗರಿ ಬೆಳೆ ವೀಕ್ಷಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯ ಆಂಧ್ರಪ್ರದೇಶದಲ್ಲಿ ಹಾಲಿನ ದರ ರಾಜ್ಯಕ್ಕಿಂತ ಹೆಚ್ಚಿದೆ. ರಾಜ್ಯದಲ್ಲಿಯೂ ಹಾಲಿನ ದರವನ್ನು ಮೊದಲೇ ಹೆಚ್ಚಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಗ್ರಾಹಕರು ಎಷ್ಟು ಮುಖ್ಯವೋ, ಹಾಲು ಉತ್ಪಾದಕರೂ ಅಷ್ಟೇ ಮುಖ್ಯ. ಉತ್ಪಾದಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಹಾಲಿನ ದರ ಏರಿಕೆಯನ್ನು ಅವರು ಸಮರ್ಥಿಸಿಕೊಂಡರು.
ಶಾಸಕರು, ಸಚಿವರ ‘ಸ್ಟ್ರಿಂಗ್ ಆಪರೇಷನ್’ :
ಶಾಸಕರು ಹಾಗೂ ಸಚಿವರ ‘ಸ್ಟ್ರಿಂಗ್ ಆಪರೇಷನ್’ ನಡೆಯುತ್ತಿದೆ, ಹುಷಾರಾಗಿರಿ ಎಂಬ ಕೆಪಿಸಿಸಿ ಅಧ್ಯಕ್ಷ, ಮತ್ತು ಸಿ.ಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ, “ಅವರಿಗೆ ಸಹಜವಾಗಿ ಆಂತರಿಕ ಮಾಹಿತಿ ಬಂದಿರಬಹುದು. ಅದಕ್ಕಾಗಿ ಅವರು ಈ ರೀತಿಯಾಗಿ ಹೇಳಿರಬಹುದು. ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ” ಎಂದರು.
ಉಸ್ತುವಾರಿ ಸಚಿವರ ನೇಮಕ ಶೀಘ್ರ
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಳಂಬವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಉಸ್ತುವಾರಿ ಸಚಿವರ ನೇಮಕವಾಗಿಲ್ಲ ಎಂಬ ಕಾರಣಕ್ಕೆ ಜಿಲ್ಲೆಯ ಯಾವುದೇ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿಲ್ಲ. ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬುಡ ಅಧ್ಯಕ್ಷ ಜೆ.ಎಸ್. ಆಂಜಿನೇಯಲು, ಡಿಸಿಸಿ ಜಿಲ್ಲಾ ಕಾರ್ಯಾಧ್ಯಕ್ಷ ವಿಷ್ಣುವರ್ಧನ್ ಬೋಯಪಾಟೆ, ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ಸುಮೈರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್ ಸೇರಿದಂತೆ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.




