ರಾಜ್ಯದಲ್ಲಿ ಶೇ.90ರಷ್ಟು ಬೆಳೆ ಹಾನಿ; ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ
ಬೆಳಗಾಯಿತು ವಾರ್ತೆ
ಬಳ್ಳಾರಿ: ರಾಜ್ಯದಲ್ಲಿ ಈ ಬಾರಿ ಅತ್ಯಂತ ಗಂಭೀರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಬೆಳೆದ ಬೆಳೆ ಕೈಗೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.
ರೈತರು ತೊಗರಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರೂ, ಮಳೆ ಕೊರತೆಯಿಂದ ಬೆಳೆ ನಷ್ಟವಾಗಿದೆ. ಬಳಿಕ ಮತ್ತೆ ಬಿತ್ತನೆ ಮಾಡಿದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಬೆಳೆ ಹಾನಿಯಾಗಿದೆ. ರಾಜ್ಯದಲ್ಲಿ ಸುಮಾರು ಶೇ.90ರಷ್ಟು ಬೆಳೆ ಹಾನಿಯಾಗಿರುವ ಪರಿಸ್ಥಿತಿ ಕಂಡುಬರುತ್ತಿದೆ ಎಂದು ಅವರು ತಿಳಿಸಿದರು.
ನೀರಾವರಿ ಪ್ರದೇಶಗಳಲ್ಲಿಯೂ ಪರಿಸ್ಥಿತಿ ಉತ್ತಮವಾಗಿಲ್ಲ. ಜಲಾಶಯಗಳಲ್ಲಿ ಸಂಗ್ರಹವಾದ ನೀರು ಹಾಗೂ ಮಳೆಯ ಪ್ರಮಾಣದ ಹಿನ್ನೆಲೆಯಲ್ಲಿ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೇಳಿದರು.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಬರದ ಪರಿಣಾಮ ಹೆಚ್ಚು ಕಂಡುಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಪ್ರವಾಸ ಕೈಗೊಂಡಿರುವುದಾಗಿ ಡಾ. ಪರಮೇಶ್ವರ ತಿಳಿಸಿದರು.
ಕೇಂದ್ರ ಸರ್ಕಾರದ ತಂಡವೂ ಈ ಭಾಗದ ಬರ ಪರಿಸ್ಥಿತಿಯನ್ನು ಪರಿಶೀಲಿಸಿದೆ ಎಂದ ಅವರು, “ರೈತರ ನೆರವಿಗೆ ಹಾಗೂ ಜನರ ನೆರವಿಗೆ ಸರ್ಕಾರ ಬರಬೇಕಿದೆ. ಸರ್ಕಾರದಿಂದ ಸಾಧ್ಯವಾದಷ್ಟು ನೆರವು ನೀಡಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ” ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಕೆಲವೆಡೆ ಜನರಿಗೆ ನೀರು ಒದಗಿಸುವುದು ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಕ್ಷೇತ್ರಕ್ಕೆ ₹306 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳಿಗೆ ಅಗತ್ಯವಿರುವ ಅನುದಾನವನ್ನು ಬಳಸಿಕೊಂಡು ಜನರಿಗೆ ಹಾಗೂ ರೈತರಿಗೆ ನೆರವಾಗುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ತಕ್ಷಣದ ಪರಿಹಾರ ಕ್ರಮವಾಗಿ ರೈತರಿಗೆ ಪ್ರಾಥಮಿಕ ಹಂತದಲ್ಲಿ ₹2,000 ನೆರವು ನೀಡುವ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ನಿಯಮದಂತೆ ಪ್ರತಿ ಹೆಕ್ಟೇರ್‌ಗೆ ₹8,500 ಪರಿಹಾರ ನೀಡಬೇಕಿದ್ದು, ರಾಜ್ಯ ಸರ್ಕಾರದ ವತಿಯಿಂದ ಈಗಾಗಲೇ ₹2,500 ನೀಡಲಾಗಿದೆ. ಕೇಂದ್ರದಿಂದ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಅಗತ್ಯ ನೆರವು ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಡಾ. ಪರಮೇಶ್ವರ ಭರವಸೆ ನೀಡಿದರು.




