ಕಳ್ಳತನಕ್ಕೆ ಕತ್ತೆಯ ಶಾಪ!: ದೊಡ್ಡ ಅಂತಾಪುರದ ಹೊಲದ ಬದುವಿನಲ್ಲಿ ಪತ್ತೆಯಾದ ಅಪರೂಪದ ಶಾಪಾಶಯ ಶಾಸನ


ಬೆಳಗಾಯಿತು ವಾರ್ತೆ
ಬಳ್ಳಾರಿ: ಇತಿಹಾಸವೆಂದರೆ ಕೇವಲ ಅರಮನೆಗಳು, ಯುದ್ಧಗಳು ಮತ್ತು ರಾಜವಂಶಗಳ ಕಥೆಯಲ್ಲ. ಗ್ರಾಮಗಳ ಹೊಲದ ಬದುವಿನಲ್ಲಿ ಮೌನವಾಗಿ ನಿಂತಿರುವ ಕಲ್ಲುಗಳೂ ಶತಮಾನಗಳ ಹಿಂದಿನ ಜನಜೀವನ, ನಂಬಿಕೆ, ಕೃಷಿ ಪದ್ಧತಿ ಮತ್ತು ಸಾಮಾಜಿಕ ವ್ಯವಸ್ಥೆಯ ಕುರಿತು ಮಹತ್ವದ ಮಾಹಿತಿಯನ್ನು ನೀಡಬಲ್ಲವು. ಅಂತಹ ಅಪರೂಪದ ಇತಿಹಾಸದ ಕಲ್ಲೊಂದು ಸಂಡೂರು ತಾಲೂಕಿನ ದೊಡ್ಡ ಅಂತಾಪುರ ಗ್ರಾಮದಲ್ಲಿ ಪತ್ತೆಯಾಗಿದೆ.
ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈವಿಧ್ಯದ ಕುರುಹುಗಳನ್ನು ಹೊಂದಿರುವ ದೊಡ್ಡ ಅಂತಾಪುರದಲ್ಲಿ ಶೈವ ದೇಗುಲಗಳ ಜೊತೆಗೆ ಜೈನ ಧರ್ಮಕ್ಕೆ ಸಂಬಂಧಿಸಿದ ಹಲವು ಅಪ್ರಕಟಿತ ಶಾಸನಗಳೂ ಬೆಳಕಿಗೆ ಬರುತ್ತಿವೆ. ಈಚೆಗೆ ವಿಜಯನಗರ ತಿರುಗಾಟ ಸಂಶೋಧನಾ ತಂಡವು ಜಿನ ತೀರ್ಥಂಕರ ಕುಂಥುನಾಥನ ಹೆಸರಿನಲ್ಲಿ ಭೂದಾನ ನೀಡಿರುವ ಮೂರು ಶಾಸನಗಳನ್ನು ಪತ್ತೆಹಚ್ಚಿತ್ತು. ಇದೀಗ ಇದೇ ಗ್ರಾಮದಲ್ಲಿ ಕೃಷಿ ಉತ್ಪನ್ನ ಅಥವಾ ಕೃಷಿಗೆ ಸಂಬಂಧಿಸಿದ ವಸ್ತುಗಳ ಕಳ್ಳತನ ತಡೆಯಲು ಶಾಪದ ರೂಪದಲ್ಲಿ ಎಚ್ಚರಿಕೆ ನೀಡಿರುವ ಅಪರೂಪದ ಶಾಸನವೊಂದು ಪತ್ತೆಯಾಗಿರುವುದು ಇತಿಹಾಸಾಸಕ್ತರ ಗಮನ ಸೆಳೆದಿದೆ.
ನಾಲ್ಕು ಸಾಲುಗಳಲ್ಲಿ ಒಂದು ಕಾಲದ ಕಥೆ
ದೊಡ್ಡ ಅಂತಾಪುರದ ತಾಯಪ್ಪ ಎಂಬುವರ ಹೊಲದ ಬದುವಿನಲ್ಲಿ ಪೂರ್ವಾಭಿಮುಖವಾಗಿ ನಿಂತಿರುವ ಈ ಶಾಸನ ಸುಮಾರು ಮೂರು ಅಡಿ ಎತ್ತರ ಮತ್ತು ಒಂದೂವರೆ ಅಡಿ ಅಗಲವಿದೆ. ಮೇಲ್ಭಾಗದಲ್ಲಿ ಕನ್ನಡ ಲಿಪಿಯಲ್ಲಿ ನಾಲ್ಕು ಸಾಲುಗಳ ಬರಹವಿದೆ. ಲಿಪಿಯ ಶೈಲಿಯನ್ನು ಆಧರಿಸಿ ಇದು ವಿಜಯನಗರೋತ್ತರ ಕಾಲದ ಪಾಳೆಯಗಾರರ ಕಾಲಕ್ಕೆ ಸೇರಿರಬಹುದೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಶಾಸನದ ವಿನ್ಯಾಸವೂ ಗಮನಾರ್ಹವಾಗಿದೆ. ಸಾಮಾನ್ಯವಾಗಿ ಶಾಸನಗಳ ಮೇಲ್ಭಾಗದಲ್ಲಿ ಸೂರ್ಯ ಮತ್ತು ಚಂದ್ರರ ಚಿತ್ರಗಳನ್ನು ಕಾಣಬಹುದು. ಆದರೆ ಈ ಶಾಸನದಲ್ಲಿ ಲಿಪಿಯ ಕೆಳಭಾಗದಲ್ಲಿ ಎಡಕ್ಕೆ ಸೂರ್ಯ ಹಾಗೂ ಬಲಕ್ಕೆ ಚಂದ್ರನ ಚಿತ್ರಗಳನ್ನು ಕೆತ್ತಲಾಗಿದೆ.
ಕಳ್ಳತನ ಮಾಡಿದರೆ ಕತ್ತೆಯ ಶಾಪ!
ಶಾಸನದ ಪ್ರಮುಖ ಆಕರ್ಷಣೆ ಅದರಲ್ಲಿರುವ ಶಾಪಾಶಯ. ಮೊದಲ ಸಾಲಿನಲ್ಲಿ ‘ಕಡಬ’ ಎಂಬ ವ್ಯಕ್ತಿ ಮತ್ತು ಆತನ ಗದ್ದೆಯ ಉಲ್ಲೇಖವಿದೆ. ನಂತರ ‘ಸೆದೆಯನ್ನು ಕದ್ದವನು’ ಎಂಬ ಅರ್ಥ ನೀಡುವ ಪದಗಳು ಕಾಣುತ್ತವೆ. ಮುಂದಿನ ಸಾಲಿನಲ್ಲಿ ಕಳ್ಳತನ ಮಾಡಿದವನಿಗೆ ಕಠಿಣ ಶಾಪದ ರೂಪದಲ್ಲಿ ‘ಕತ್ತೆಯ ತುಣ್ಣಿ ತಿಂದನು’ ಎಂಬ ಪದಪ್ರಯೋಗವಿದೆ.
ಈ ಪದಗಳನ್ನು ಒಟ್ಟಾಗಿ ಅರ್ಥೈಸಿದಾಗ, ‘ಕಡಬನ ಗದ್ದೆಯ ಸೆದೆಯನ್ನು ಕದ್ದವನು ಕತ್ತೆಯ ತುಣ್ಣೆಯನ್ನು ತಿಂದನು’ ಎಂಬ ರೀತಿಯ ಶಾಪಾಶಯ ರೂಪುಗೊಳ್ಳುತ್ತದೆ. ಇಂದಿನ ಓದುಗರಿಗೆ ಈ ಪದಪ್ರಯೋಗ ವಿಚಿತ್ರವಾಗಿ ಅಥವಾ ಹಾಸ್ಯಾಸ್ಪದವಾಗಿ ಕಂಡರೂ, ಅಂದಿನ ಧಾರ್ಮಿಕ ನಂಬಿಕೆಗಳು, ಸಾಮಾಜಿಕ ಆಚರಣೆಗಳು ಮತ್ತು ಆಸ್ತಿಯ ರಕ್ಷಣೆಯ ಹಿನ್ನೆಲೆಯಲ್ಲಿಯೇ ಇದನ್ನು ಅರ್ಥೈಸಬೇಕಾಗಿದೆ.
ಹೊಲದಲ್ಲಿ ಬೆಳೆದ ಫಸಲಷ್ಟೇ ಅಲ್ಲದೆ, ಕೃಷಿಗೆ ಸಂಬಂಧಿಸಿದ ವಸ್ತುಗಳನ್ನೂ ಕಳ್ಳರು ಕದ್ದೊಯ್ಯುತ್ತಿದ್ದರೆಂಬ ಸುಳಿವು ಈ ಶಾಸನದಿಂದ ದೊರೆಯುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ ತಿಳಿಸಿದ್ದಾರೆ.
ಶಾಪವೇ ಆಗಿತ್ತು ರಕ್ಷಣೆಯ ಕವಚ
ಹಿಂದಿನ ಕಾಲದಲ್ಲಿ ಶಾಸನಗಳ ಕೊನೆಯಲ್ಲಿ ದಾನವನ್ನು ಕಸಿದುಕೊಳ್ಳುವವರು, ದಾನವನ್ನು ನಿಲ್ಲಿಸುವವರು ಅಥವಾ ಶಾಸನವನ್ನು ಹಾಳುಮಾಡುವವರಿಗೆ ಶಾಪ ನೀಡುವ ಪದ್ಧತಿ ಸಾಮಾನ್ಯವಾಗಿತ್ತು. ಇಂತಹ ಶಾಪಗಳು ಕೇವಲ ಭಯ ಹುಟ್ಟಿಸುವ ಉದ್ದೇಶ ಹೊಂದಿರದೆ, ಸಮಾಜದಲ್ಲಿ ಧಾರ್ಮಿಕ ನಂಬಿಕೆಗಳ ಮೂಲಕ ಕಾನೂನುಬದ್ಧ ಅಥವಾ ಸಾಮಾಜಿಕ ನಿಯಮಗಳನ್ನು ರಕ್ಷಿಸುವ ಸಾಧನವಾಗಿಯೂ ಕಾರ್ಯನಿರ್ವಹಿಸುತ್ತಿದ್ದವು.
ದೊಡ್ಡ ಅಂತಾಪುರದಲ್ಲೇ ದೊರೆತ ಮತ್ತೊಂದು ಶಾಸನದಲ್ಲಿ ದಾನವನ್ನು ನಾಶಪಡಿಸುವವರು ಅಥವಾ ನಿಲ್ಲಿಸುವವರು ವಾರಾಣಾಸಿಯಲ್ಲಿ ತಾಯಿಯನ್ನು ಕೊಂದ ಪಾಪಕ್ಕೆ ಗುರಿಯಾಗುತ್ತಾರೆ ಎಂಬ ಎಚ್ಚರಿಕೆ ಇದೆ. ಮಸ್ಕಿಯ ಮೂಡಲದಿನ್ನಿ ಗ್ರಾಮದ ಶಾಸನವೊಂದರಲ್ಲಿಯೂ ಭೂಮಿಯ ಹಕ್ಕನ್ನು ಅನುಭವಿಸದವರಿಗೆ ಕಠಿಣ ಶಾಪ ನೀಡಿರುವ ಉದಾಹರಣೆ ಕಂಡುಬರುತ್ತದೆ.
ಹೀಗಾಗಿ ಶಾಪಾಶಯಗಳು ಅಂದಿನ ಜನರ ಧಾರ್ಮಿಕ ನಂಬಿಕೆಗಳೊಂದಿಗೆ ಆಳವಾಗಿ ಬೆಸೆದುಕೊಂಡಿದ್ದವು. ಶಾಸನಕ್ಕೆ ಹಾನಿ ಮಾಡಿದರೆ ಪಾಪ ಅಥವಾ ಶಾಪ ಎದುರಾಗುತ್ತದೆ ಎಂಬ ನಂಬಿಕೆಯೇ ಅದರ ಸಂರಕ್ಷಣೆಗೆ ಪರೋಕ್ಷ ಕವಚವಾಗಿತ್ತು.
ಕೆಳಭಾಗದ ಶಿಲ್ಪವೂ ಕುತೂಹಲಕಾರಿ
ಶಾಸನದ ಕೆಳಭಾಗದಲ್ಲಿ ವಿಶೇಷ ಭಂಗಿಯಲ್ಲಿ ನಿಂತಿರುವ ಪುರುಷನ ಶಿಲ್ಪವಿದೆ. ಶಿಲ್ಪದ ಅಂಗಾಂಗಗಳನ್ನು ಸ್ಪಷ್ಟವಾಗಿ ತೋರಿಸಿರುವುದು ಗಮನಾರ್ಹ. ಈ ರೀತಿಯ ಚಿತ್ರಣವು ಶಾಪಾಶಯದ ಸಂಕೇತಾತ್ಮಕ ಹಿನ್ನೆಲೆ, ಅಂದಿನ ಜನಪದ ನಂಬಿಕೆಗಳು ಹಾಗೂ ಶಿಲ್ಪಕಲೆಯ ಅಭಿವ್ಯಕ್ತಿಗಳ ಕುರಿತು ಮತ್ತಷ್ಟು ಅಧ್ಯಯನಕ್ಕೆ ಅವಕಾಶ ಕಲ್ಪಿಸುತ್ತದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಎಚ್. ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಸಂಶೋಧಕರಿಂದ ಪತ್ತೆ
ವಿಜಯನಗರ ತಿರುಗಾಟ ಸಂಶೋಧನಾ ತಂಡದ ಪ್ರೊ. ಎಚ್. ತಿಪ್ಪೇಸ್ವಾಮಿ, ಡಾ. ಗೋವಿಂದ, ಡಾ. ಕೃಷ್ಣಗೌಡ, ಸಂಶೋಧಕರಾದ ಎಚ್. ರವಿ, ಇಸ್ಮಾಯಿಲ್ ಸಿದ್ದಿಕಿ, ಅಶೋಕ ನಾಯಕ ದಿದ್ದಿಗಿ, ರಾಗಿ ಶಿವರಾಮಪ್ಪ ಹಾಗೂ ದೈಹಿಕ ಶಿಕ್ಷಕ ಪಾಪಯ್ಯ ಅವರು ಗ್ರಾಮದ ತಾಯಪ್ಪ ಅವರ ಸಹಕಾರದೊಂದಿಗೆ ಶಾಸನವನ್ನು ಬೆಳಕಿಗೆ ತಂದಿದ್ದಾರೆ.
ಸಂರಕ್ಷಣೆಗೆ ಒತ್ತು ಅಗತ್ಯ
ಹೊಲದ ಬದುವಿನಲ್ಲಿ ತೆರೆದ ವಾತಾವರಣದಲ್ಲಿರುವ ಇಂತಹ ಶಾಸನಗಳು ಕೃಷಿ ಚಟುವಟಿಕೆಗಳು, ಹವಾಮಾನ ವೈಪರೀತ್ಯ ಹಾಗೂ ನಿರ್ಲಕ್ಷ್ಯದಿಂದ ಹಾನಿಗೊಳಗಾಗುವ ಸಾಧ್ಯತೆಯಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಗಳು ಸ್ಥಳ ಪರಿಶೀಲನೆ ನಡೆಸಿ, ಶಾಸನವನ್ನು ವೈಜ್ಞಾನಿಕವಾಗಿ ದಾಖಲಿಸಿ ಸಂರಕ್ಷಿಸಬೇಕು ಎಂದು ದೃಶ್ಯಕಲಾ ವಿಭಾಗದ ಡಾ. ಕೃಷ್ಣಗೌಡ ಒತ್ತಾಯಿಸಿದ್ದಾರೆ.
ಒಂದು ಕಾಲದಲ್ಲಿ ಕಳ್ಳತನ ತಡೆಯಲು ಕೆತ್ತಿದ ಶಾಪ, ಇಂದು ಅದೇ ಸಮಾಜದ ಬದುಕಿನ ಕಥೆಯನ್ನು ಹೇಳುತ್ತಿದೆ. ಹೊಲದ ಬದುವಿನಲ್ಲಿ ನಿಂತಿರುವ ಈ ಕಲ್ಲು ಕೇವಲ ನಾಲ್ಕು ಸಾಲಿನ ಶಾಸನವಲ್ಲ; ಮಣ್ಣಿನೊಳಗೆ ಮರೆಯಾಗಿದ್ದ ಒಂದು ಕಾಲಘಟ್ಟದ ಕೃಷಿ ಬದುಕು, ನಂಬಿಕೆ, ಸಾಮಾಜಿಕ ವ್ಯವಸ್ಥೆ ಮತ್ತು ಜನಪದ ಸಂಸ್ಕೃತಿಯ ಜೀವಂತ ಸಾಕ್ಷಿಯಾಗಿದೆ.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles