ಸುಸ್ಥಿರ ಸಮಾಜದ ಅಭಿವೃದ್ಧಿಯಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಅನನ್ಯ

ಬೆಳಗಾಯಿತು ವಾರ್ತೆ
ಬಳ್ಳಾರಿ: ಸುಸ್ಥಿರ ಸಮಾಜದ ಅಭಿವೃದ್ಧಿಯಲ್ಲಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಮತ್ತು ಕೊಡುಗೆ ಅನನ್ಯವಾಗಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ್ ಹೇಳಿದರು.
ನಗರದ ರಾಘವ ಕಲಾಮಂದಿರದಲ್ಲಿ ಸೆ.24ರಂದು ಫೇವರ್ಡ್-ಕೆ ಬಳ್ಳಾರಿ ಜಿಲ್ಲಾ ಒಕ್ಕೂಟದ ನೇತೃತ್ವದಲ್ಲಿ, ಫೇವರ್ಡ್-ಕೆ ರಾಜ್ಯ ಸಮಿತಿ ಹಾಗೂ ಡ್ರೀಮ್ ಇಂಡಿಯಾ ನೆಟ್‌ವರ್ಕ್, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯ ನಾಗರಿಕರ ಹಾರೈಕೆ ಕೇಂದ್ರ ‘ನೆಮ್ಮದಿ’ ಹಾಗೂ ಮಕ್ಕಳ ಪಾಲನಾ ಕೇಂದ್ರ ‘ಕುಶಲ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ದುರ್ಬಲ ವರ್ಗಗಳ ಏಳಿಗೆ ಹಾಗೂ ಮಕ್ಕಳ ಸಂರಕ್ಷಣೆಗಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಸರ್ಕಾರದೊಂದಿಗೆ ಕೈಜೋಡಿಸಿ ಅಭಿವೃದ್ಧಿಯ ಪಾಲುದಾರರಾಗಿ ಸ್ವಯಂಸೇವಾ ಸಂಸ್ಥೆಗಳು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಬಳ್ಳಾರಿ ಜಿಲ್ಲೆಯಲ್ಲಿರುವ ಫೇವರ್ಡ್-ಕೆ ಸದಸ್ಯ ಸಂಸ್ಥೆಗಳಿಗೆ ಜಿಲ್ಲಾಡಳಿತ ಹಾಗೂ ನಾಗರಿಕ ಸಮಾಜದ ಸಹಕಾರ ನೀಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಫೇವರ್ಡ್-ಕೆ ಕರ್ನಾಟಕ ಮತ್ತು ಡ್ರೀಮ್ ಇಂಡಿಯಾ ನೆಟ್‌ವರ್ಕ್ ಸಹಯೋಗದಲ್ಲಿ ಆರಂಭವಾಗಿರುವ ‘ನೆಮ್ಮದಿ’ ಮತ್ತು ‘ಕುಶಲ’ ಕೇಂದ್ರಗಳನ್ನು ಸರ್ಕಾರದ ನಿಯಮ, ಮಾರ್ಗಸೂಚಿ ಹಾಗೂ ಕಾನೂನು ನಿಬಂಧನೆಗಳಿಗೆ ಅನುಗುಣವಾಗಿ ನಡೆಸಬೇಕು. ಕೇಂದ್ರಗಳ ಕಾರ್ಯನಿರ್ವಹಣೆಗೆ ಅಗತ್ಯ ಸಹಕಾರವನ್ನು ಇಲಾಖೆ ನೀಡಲಿದೆ ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿ ಬಳ್ಳಾರಿ ಮಹಾನಗರ ಪಾಲಿಕೆಯ ಅಭಿಯಾನ ವ್ಯವಸ್ಥಾಪಕ ಮತ್ವತ್ ಗುರು ಬಸವರಾಜ್ ಮಾತನಾಡಿ, ಫೇವರ್ಡ್-ಕೆ ಕಳೆದ ನಾಲ್ಕು ದಶಕಗಳಿಂದ ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ. ಸರ್ಕಾರದ ನೀತಿ ಹಾಗೂ ಪಾಲನಾ ಬದಲಾವಣೆಗಳಲ್ಲಿಯೂ ಸಂಘಟನೆ ತನ್ನದೇ ಆದ ಪಾತ್ರ ವಹಿಸಿಕೊಂಡು ಬಂದಿದೆ. ಇದೀಗ ಬಳ್ಳಾರಿ ಜಿಲ್ಲೆಯಲ್ಲಿ ಹಿರಿಯ ನಾಗರಿಕರು ಮತ್ತು ಮಕ್ಕಳ ಉತ್ತಮ ಬದುಕು ಹಾಗೂ ಶಿಕ್ಷಣಕ್ಕಾಗಿ ಕೇಂದ್ರಗಳನ್ನು ಆರಂಭಿಸಿರುವುದು ಅಭಿನಂದನೀಯ ಎಂದರು. ಮಹಾನಗರ ಪಾಲಿಕೆಯ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಆರ್. ದೇವಣ್ಣ ಮಾತನಾಡಿ, ಹಿರಿಯರನ್ನು ಪ್ರೀತಿ, ಗೌರವ ಮತ್ತು ಕಾಳಜಿಯಿಂದ ನೋಡಿಕೊಳ್ಳಬೇಕಾದ ಸಂದರ್ಭದಲ್ಲಿ ಅನೇಕರು ವಿವಿಧ ಕಾರಣಗಳಿಂದ ಸಂಕಷ್ಟದ ಬದುಕು ನಡೆಸುತ್ತಿದ್ದಾರೆ. ಅಂತಹವರಿಗೆ ‘ನೆಮ್ಮದಿ’ ಕೇಂದ್ರಗಳು ಗೌರವಯುತ ಹಾಗೂ ನೆಮ್ಮದಿಯ ಜೀವನ ನಡೆಸಲು ನೆರವಾಗಲಿವೆ. ಪೋಷಕರಿಲ್ಲದ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸಿಕೊಳ್ಳಲು ಅಗತ್ಯ ವಾತಾವರಣ ಕಲ್ಪಿಸುವ ಉದ್ದೇಶದಿಂದ ‘ಕುಶಲ’ ಕೇಂದ್ರ ಆರಂಭಿಸಿರುವುದು ಶ್ಲಾಘನೀಯ ಎಂದರು.
ಫೇವರ್ಡ್-ಕೆ ಕಾರ್ಯಕ್ರಮ ವ್ಯವಸ್ಥಾಪಕ ಕೃಷ್ಣಮೂರ್ತಿ ಎಂ.ಎಸ್. ಆಶಯ ನುಡಿಗಳನ್ನಾಡಿ, ‘ನೆಮ್ಮದಿ’ ಮತ್ತು ‘ಕುಶಲ’ ಕೇಂದ್ರಗಳ ಉದ್ದೇಶ, ಯೋಜನೆ, ಆರ್ಥಿಕ ನೆರವು, ಸ್ವಯಂಸೇವಾ ಸಂಸ್ಥೆಗಳ ಜವಾಬ್ದಾರಿ, ಕಾನೂನು ನಿಯಮಗಳ ಪಾಲನೆ ಹಾಗೂ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯದ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫೇವರ್ಡ್-ಕೆ ಬಳ್ಳಾರಿ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ, ರಾಜ್ಯ ಆಡಳಿತ ಮಂಡಳಿ ನಿರ್ದೇಶಕಿ ಹಾಗೂ ರಾಜ್ಯ ಮಹಿಳಾ ಸಂಚಾಲಕಿ ಕೆ. ಪುಷ್ಪ ಚಂದ್ರಶೇಖರ್ ಮಾತನಾಡಿ, ಫೇವರ್ಡ್-ಕೆ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ವಿಶೇಷಚೇತನರು, ಬರ ಪರಿಹಾರ, ಯುವ ಸಬಲೀಕರಣ ಹಾಗೂ ಪರಿಸರ ಸುಸ್ಥಿರತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಲಕ್ಷ್ಮೀದೇವಿ ನಿರೂಪಿಸಿದರು. ಖಜಾಂಚಿ ವಿಜಯಕುಮಾರ್ ಸ್ವಾಗತಿಸಿದರು. ಸಹ ಕಾರ್ಯದರ್ಶಿ ತಿಪ್ಪೇಸ್ವಾಮಿ ವಂದಿಸಿದರು. ಗೌರವಾಧ್ಯಕ್ಷ ಉಮಾಪತಿ, ಕಾರ್ಯದರ್ಶಿ ಶಕುಂತಲಾ, ಸುಮಾರೆಡ್ಡಿ, ಅಮೃತ ವಾತ್ಸಲ್ಯ, ಶ್ರೀಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles