ಬೆಳಗಾಯಿತು ವಾರ್ತೆ
ಬಳ್ಳಾರಿ: ತುಮಕೂರು–ದಾವಣಗೆರೆ ಹೊಸ ಬ್ರಾಡ್ಗೇಜ್ (ಬಿಜಿ) ಮಾರ್ಗಕ್ಕೆ ಸಂಬಂಧಿಸಿದಂತೆ ತೊಳಹುಣಸೆ ಯಾರ್ಡ್ನಲ್ಲಿ ಸಂಪರ್ಕ ಜೋಡಣೆ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆ.21ರಿಂದ ಅ.13ರವರೆಗೆ ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದ್ದು, ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದು, ಮಾರ್ಗ ಬದಲಾವಣೆ, ತಡವಾಗಿ ಸಂಚಾರ ಹಾಗೂ ಮಾರ್ಗಮಧ್ಯೆ ನಿಯಂತ್ರಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಎರಡು ದಿನ ರೈಲು ಸಂಚಾರ ರದ್ದು
ರೈಲು ಸಂಖ್ಯೆ 16214 ಎಸ್ಎಸ್ಎಸ್ ಹುಬ್ಬಳ್ಳಿ–ಅರಸೀಕೆರೆ ಡೈಲಿ ಎಕ್ಸ್ಪ್ರೆಸ್ ರೈಲನ್ನು ಅ.8 ಮತ್ತು 9ರಂದು ರದ್ದುಪಡಿಸಲಾಗುತ್ತದೆ. ರೈಲು ಸಂಖ್ಯೆ 16213 ಅರಸೀಕೆರೆ–ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲನ್ನು ಅ.9 ಮತ್ತು 10ರಂದು ರದ್ದುಪಡಿಸಲಾಗುತ್ತದೆ.
ಸಿದ್ಧಗಂಗಾ ಸೇರಿದಂತೆ ಹಲವು ರೈಲುಗಳ ಭಾಗಶಃ ರದ್ದು
ರೈಲು ಸಂಖ್ಯೆ 12725 ಕೆಎಸ್ಆರ್ ಬೆಂಗಳೂರು–ಧಾರವಾಡ ಸಿದ್ಧಗಂಗಾ ಡೈಲಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಸೆ.22, 23, 27 ಹಾಗೂ ಅ.1, 2, 3, 6, 7, 8 ಮತ್ತು 9ರಂದು ಬೀರೂರು–ಧಾರವಾಡ ನಡುವೆ ಭಾಗಶಃ ರದ್ದಾಗಲಿದೆ. ಧಾರವಾಡದ ಬದಲಿಗೆ ಬೀರೂರಿನಲ್ಲೇ ಪ್ರಯಾಣ ಮುಕ್ತಾಯಗೊಳ್ಳಲಿದೆ.
ಅದೇ ರೀತಿ ರೈಲು ಸಂಖ್ಯೆ 12726 ಧಾರವಾಡ–ಕೆಎಸ್ಆರ್ ಬೆಂಗಳೂರು ಸಿದ್ಧಗಂಗಾ ಎಕ್ಸ್ಪ್ರೆಸ್ ಮೇಲ್ಕಂಡ ದಿನಗಳ ನಂತರದ ದಿನಾಂಕಗಳಲ್ಲಿ ಧಾರವಾಡದ ಬದಲಿಗೆ ಬೀರೂರಿನಿಂದಲೇ ನಿಗದಿತ ಸಮಯಕ್ಕೆ ಹೊರಡಲಿದೆ.
ರೈಲು ಸಂಖ್ಯೆ 17347 ಎಸ್ಎಸ್ಎಸ್ ಹುಬ್ಬಳ್ಳಿ–ಚಿತ್ರದುರ್ಗ ಹಾಗೂ 17348 ಚಿತ್ರದುರ್ಗ–ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ಗಳ ಸಂಚಾರವನ್ನು ಸೆ.25, 26, 27 ಹಾಗೂ ಅ.1, 5, 6, 11, 12 ಮತ್ತು 13ರಂದು ಹರಿಹರ–ಚಿತ್ರದುರ್ಗ ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ. ಎರಡೂ ರೈಲುಗಳ ಪ್ರಯಾಣ ಹರಿಹರದಿಂದಲೇ ಆರಂಭ ಅಥವಾ ಅಂತ್ಯಗೊಳ್ಳಲಿದೆ.
ರೈಲು ಸಂಖ್ಯೆ 20676 ಮೈಸೂರು–ಬೆಳಗಾವಿ ಎಕ್ಸ್ಪ್ರೆಸ್ ಅ.ನಿರ್ದಿಷ್ಟ ಒಂಬತ್ತು ದಿನಗಳಲ್ಲಿ ಬೀರೂರು–ಬೆಳಗಾವಿ ನಡುವೆ ಭಾಗಶಃ ರದ್ದಾಗಲಿದ್ದು, ಬೆಳಗಾವಿಯ ಬದಲಿಗೆ ಬೀರೂರಿನಲ್ಲಿ ಪ್ರಯಾಣ ಮುಕ್ತಾಯಗೊಳ್ಳಲಿದೆ. 20675 ಬೆಳಗಾವಿ–ಮೈಸೂರು ಎಕ್ಸ್ಪ್ರೆಸ್ ಕೂಡ ಬೆಳಗಾವಿಯ ಬದಲಿಗೆ ಬೀರೂರಿನಿಂದ ಪ್ರಯಾಣ ಆರಂಭಿಸಲಿದೆ.
ಹಲವು ರೈಲುಗಳ ಮಾರ್ಗ ಬದಲಾವಣೆ
ರೈಲು ಸಂಖ್ಯೆ 19667 ಉದಯಪುರ ಸಿಟಿ–ಮೈಸೂರು ಹಮ್ಸಫರ್ ಎಕ್ಸ್ಪ್ರೆಸ್ ಸೆ.21 ಮತ್ತು ಅ.5ರಂದು ಎಸ್ಎಸ್ಎಸ್ ಹುಬ್ಬಳ್ಳಿ–ಬಳ್ಳಾರಿ–ಗುಂತಕಲ್–ಧರ್ಮಾವರಂ–ಕೆಎಸ್ಆರ್ ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿದ್ದು, ದಾವಣಗೆರೆಯಲ್ಲಿ ನಿಲುಗಡೆ ಇರುವುದಿಲ್ಲ.
ರೈಲು ಸಂಖ್ಯೆ 22497 ಶ್ರೀ ಗಂಗಾನಗರ–ತಿರುಚ್ಚಿರಾಪಳ್ಳಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಕೂಡ ಇದೇ ದಿನಗಳಲ್ಲಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲಿದ್ದು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಹಾಗೂ ಬಾಣಸವಾಡಿ ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.
ರೈಲು ಸಂಖ್ಯೆ 56529 ಹರಿಹರ–ಹೊಸಪೇಟೆ ಹಾಗೂ 56530 ಹೊಸಪೇಟೆ–ಹರಿಹರ ಡೈಲಿ ಪ್ಯಾಸೆಂಜರ್ ರೈಲುಗಳು ಸೆ.21ರಿಂದ ಅ.13ರವರೆಗೆ ಹರಿಹರ–ಅಮರಾವತಿ ಕಾಲೋನಿ–ತೇಲಗಿ ಮಾರ್ಗದಲ್ಲಿ ಸಂಚರಿಸಲಿವೆ. ಈ ಅವಧಿಯಲ್ಲಿ ದಾವಣಗೆರೆ ಮತ್ತು ತೊಳಹುಣಸೆ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್ಪ್ರೆಸ್ ಕೂಡ ಆಯ್ದ 11 ದಿನಗಳಲ್ಲಿ ಎಸ್ಎಸ್ಎಸ್ ಹುಬ್ಬಳ್ಳಿ–ಬಳ್ಳಾರಿ–ರಾಯದುರ್ಗ–ಚಿಕ್ಕಜಾಜೂರು ಮಾರ್ಗದಲ್ಲಿ ಸಂಚರಿಸಲಿದ್ದು, ಹಾವೇರಿ, ರಾಣಿಬೆನ್ನೂರು, ಹರಿಹರ ಹಾಗೂ ದಾವಣಗೆರೆಯಲ್ಲಿ ನಿಲುಗಡೆ ಇರುವುದಿಲ್ಲ.
ರೈಲು ಸಂಖ್ಯೆ 17391 ಕೆಎಸ್ಆರ್ ಬೆಂಗಳೂರು–ಸಿಂಧನೂರು ಎಕ್ಸ್ಪ್ರೆಸ್ ಆಯ್ದ ಎಂಟು ದಿನಗಳಲ್ಲಿ ಚಿಕ್ಕಜಾಜೂರು–ರಾಯದುರ್ಗ–ಗಿಣಿಗೆರಾ ಮಾರ್ಗದಲ್ಲಿ ಸಂಚರಿಸಲಿದ್ದು, ಹಲವು ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.
ಪ್ರಯಾಗ್ರಾಜ್–ಎಸ್ಎಸ್ಎಸ್ ಹುಬ್ಬಳ್ಳಿ ಹಾಗೂ ಎಸ್ಎಸ್ಎಸ್ ಹುಬ್ಬಳ್ಳಿ–ಪ್ರಯಾಗ್ರಾಜ್ ವಿಶೇಷ ರೈಲುಗಳ ಮಾರ್ಗದಲ್ಲಿಯೂ ಬದಲಾವಣೆ ಮಾಡಲಾಗಿದ್ದು, ದಾವಣಗೆರೆ ಸೇರಿದಂತೆ ಕೆಲವು ನಿಲ್ದಾಣಗಳ ನಿಗದಿತ ನಿಲುಗಡೆ ರದ್ದಾಗಲಿದೆ.
ಕೆಲವು ರೈಲುಗಳು ತಡವಾಗಿ ಹೊರಡಲಿವೆ
ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್ಪ್ರೆಸ್ ಸೆ.20 ಮತ್ತು 28ರಂದು 90 ನಿಮಿಷ ತಡವಾಗಿ ಹೊರಡಲಿದೆ. 12777 ಎಸ್ಎಸ್ಎಸ್ ಹುಬ್ಬಳ್ಳಿ–ತಿರುವನಂತಪುರಂ ನಾರ್ತ್ ಎಕ್ಸ್ಪ್ರೆಸ್ ಸೆ.23 ಮತ್ತು ಅ.7ರಂದು 120 ನಿಮಿಷ ತಡವಾಗಿ ಹೊರಡಲಿದೆ.
07355 ಎಸ್ಎಸ್ಎಸ್ ಹುಬ್ಬಳ್ಳಿ–ರಾಮೇಶ್ವರಂ ಮತ್ತು 07356 ರಾಮೇಶ್ವರಂ–ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ರೈಲುಗಳು ಅ.4 ಮತ್ತು 5ರಂದು ತಲಾ 120 ನಿಮಿಷ ತಡವಾಗಿ ಹೊರಡಲಿವೆ. 12726 ಸಿದ್ಧಗಂಗಾ ಎಕ್ಸ್ಪ್ರೆಸ್ ಅ.12ರಂದು ಧಾರವಾಡದಿಂದ 60 ನಿಮಿಷ ತಡವಾಗಿ ಹೊರಡಲಿದೆ.
ವಂದೇ ಭಾರತ್ ಸೇರಿದಂತೆ ಹಲವು ರೈಲುಗಳಿಗೆ ಮಾರ್ಗಮಧ್ಯೆ ನಿಯಂತ್ರಣ
ಕಾಮಗಾರಿ ಹಿನ್ನೆಲೆಯಲ್ಲಿ 12726, 16213, 16588, 17347, 26751 ಬೆಳಗಾವಿ–ಕೆಎಸ್ಆರ್ ಬೆಂಗಳೂರು ವಂದೇ ಭಾರತ್, 16587, 22498, 12649, 20675 ಸೇರಿದಂತೆ ಹಲವು ರೈಲುಗಳನ್ನು ವಿವಿಧ ದಿನಗಳಲ್ಲಿ ಮಾರ್ಗಮಧ್ಯೆ 15ರಿಂದ 150 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
ಅದೇ ರೀತಿ 19668 ಮೈಸೂರು–ಉದಯಪುರ ಸಿಟಿ, 17391 ಕೆಎಸ್ಆರ್ ಬೆಂಗಳೂರು–ಸಿಂಧನೂರು, 26752 ಕೆಎಸ್ಆರ್ ಬೆಂಗಳೂರು–ಬೆಳಗಾವಿ ವಂದೇ ಭಾರತ್, 12725 ಸಿದ್ಧಗಂಗಾ, 14806 ಬಾರ್ಮೇರ್–ಯಶವಂತಪುರ, 12778 ತಿರುವನಂತಪುರಂ ನಾರ್ತ್–ಎಸ್ಎಸ್ಎಸ್ ಹುಬ್ಬಳ್ಳಿ, 20661 ಕೆಎಸ್ಆರ್ ಬೆಂಗಳೂರು–ಧಾರವಾಡ ವಂದೇ ಭಾರತ್, 12079 ಜನಶತಾಬ್ದಿ ಸೇರಿದಂತೆ ವಿವಿಧ ರೈಲುಗಳ ಸಂಚಾರದಲ್ಲಿಯೂ ತಾತ್ಕಾಲಿಕ ನಿಯಂತ್ರಣ ಇರಲಿದೆ.
ತೊಳಹುಣಸೆ ನಿಲುಗಡೆಯೂ ರದ್ದು
ತೊಳಹುಣಸೆ ನಿಲ್ದಾಣದಲ್ಲಿ ರೈಲುಗಳ ನಿಗದಿತ ನಿಲುಗಡೆಯನ್ನೂ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ರೈಲು ಸಂಖ್ಯೆ 16213 ಮತ್ತು 16214ಗಳಿಗೆ ಸೆ.21ರಿಂದ ಅ.13ರವರೆಗೆ ವಿವಿಧ ದಿನಗಳಲ್ಲಿ ತೊಳಹುಣಸೆ ನಿಲುಗಡೆ ಇರುವುದಿಲ್ಲ. 17347 ಮತ್ತು 17348 ಎಕ್ಸ್ಪ್ರೆಸ್ ರೈಲುಗಳಿಗೂ ಆಯ್ದ 15 ದಿನಗಳಲ್ಲಿ ತೊಳಹುಣಸೆಯಲ್ಲಿ ನಿಲುಗಡೆ ರದ್ದುಗೊಳ್ಳಲಿದೆ.
ಪ್ರಯಾಣಿಕರು ತಮ್ಮ ಪ್ರಯಾಣದ ದಿನದ ರೈಲು ವೇಳಾಪಟ್ಟಿ ಮತ್ತು ನಿಲುಗಡೆ ವಿವರಗಳನ್ನು ಮುಂಚಿತವಾಗಿ ಪರಿಶೀಲಿಸಿಕೊಂಡು ಪ್ರಯಾಣಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.





