ಬೆಳಗಾಯಿತು ವಾರ್ತೆ| Www.belagayithu.in
ಬಳ್ಳಾರಿ: ತನ್ನ ವಿರುದ್ಧ ದಾಖಲಾಗಿರುವ ಗ್ರಾವೆಲ್ ಸಾಗಾಣಿಕೆ ಪ್ರಕರಣವು ಸುಳ್ಳು ಹಾಗೂ ರಾಜಕೀಯ ದುರುದ್ದೇಶದಿಂದ ದಾಖಲಿಸಲಾಗಿದೆ ಎಂದು ಆರೋಪಿಸಿ ದಲಿತ ಯುವ ನಾಯಕ ಹಾಗೂ ಪ್ರಾಥಮಿಕ ರೈತ ಸಹಕಾರ ಸಂಘದ ನಿರ್ದೇಶಕ ಹೆಚ್.ಎಂ. ಗುರುಮೂರ್ತಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕುರುಗೋಡು ತಾಲೂಕಿನ ತಿಮ್ಮಾಲಾಪುರ ಗ್ರಾಮದ ಸರ್ವೇ ಸಂಖ್ಯೆ 5/ಎ1/ಎ2 ಮತ್ತು 51/21 ಜಮೀನಿನಲ್ಲಿ ಅಕ್ರಮವಾಗಿ ಗ್ರಾವೆಲ್ ಸಾಗಾಣಿಕೆ ನಡೆಸಿದ ಆರೋಪದಡಿ 2026ರ ಮೇ 19ರಂದು ಕುಡುತಿನಿ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ, ಜಮೀನಿನಲ್ಲಿನ ಯಾವುದೇ ಗ್ರಾವೆಲ್ ಸಾಗಾಣಿಕೆ ಚಟುವಟಿಕೆಗೂ ತನಗೆ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ತಮ್ಮ ವಿರುದ್ಧ ಏಳುಬೆಂಚಿ ಗ್ರಾಮದ ಕೆಲವರು ಸೇರಿಕೊಂಡು ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸಿದ್ದು, ಮಾಧ್ಯಮಗಳಲ್ಲಿಯೂ ತಪ್ಪು ಮಾಹಿತಿ ಹರಡಿದ್ದಾರೆ ಎಂದು ದೂರಿದರು.
ಸುಮಾರು 15–20 ವರ್ಷಗಳಿಂದ ರಾಜಕೀಯ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ತಾವು ಈ ಹಿಂದೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರಾಥಮಿಕ ರೈತ ಸಹಕಾರ ಸಂಘದ ನಿರ್ದೇಶಕರಾಗಿ ರೈತರ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ತಮ್ಮ ಬೆಳವಣಿಗೆಯನ್ನು ಸಹಿಸಲಾಗದೇ ರಾಜಕೀಯ ತೇಜೋವಧೆ ಮಾಡುವ ಉದ್ದೇಶದಿಂದ ಈ ರೀತಿಯ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು.
ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಸತ್ಯತೆ ಪರಿಶೀಲಿಸಿ, ಯಾವುದೇ ತಪ್ಪಿಲ್ಲದ ಕಾರಣ ಪ್ರಕರಣದಿಂದ ಮುಕ್ತಗೊಳಿಸಬೇಕು ಎಂದು ಪೊಲೀಸ್ ಇಲಾಖೆಯನ್ನು ಅವರು ಒತ್ತಾಯಿಸಿದರು. ಅಲ್ಲದೆ, ಸುಳ್ಳು ಆರೋಪ ಮಾಡಿ ತಮ್ಮ ಮಾನಹಾನಿಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ್, ಕೆಂಚಪ್ಪ, ಶೇಕ್ಷಾವಲಿ, ಬಸವರಾಜ್, ಬ್ಯಾಲಪ್ಪ ಸೇರಿದಂತೆ ಇತರರು ಹಾಜರಿದ್ದರು.





