ಅಹಿಂದ ಹೆಸರಿನಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯ: ಆರೋಪ

ಬೆಳಗಾಯಿತು ವಾರ್ತೆ
ಬಳ್ಳಾರಿ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಹೆಸರಿನಲ್ಲಿ ರಾಜಕೀಯ ಮಾಡಿರುವ ಕಾಂಗ್ರೆಸ್ ಸರ್ಕಾರವು ಅವರಿಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎನ್. ರವಿಕುಮಾರ್ ಆರೋಪಿಸಿದರು.
ನಗರದ ಮೋಕಾ ರಸ್ತೆಯ ವಾಜಪೇ ಬಡಾವಣೆಯಲ್ಲಿರುವ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಅಹಿಂದ’ ಹೆಸರಿನಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನೀಡಿರುವ ಕೊಡುಗೆ ಏನು ಎಂಬುದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಕಾಂತರಾಜ್ ವರದಿಯನ್ನು ಸರ್ಕಾರ ಸಮರ್ಪಕವಾಗಿ ಜಾರಿಗೊಳಿಸುವ ಬದಲು ಇತಿಹಾಸದ ಪುಟಗಳಿಗೆ ಸೇರಿಸಿದೆ. ಮಧುಸೂದನ್ ನೇತೃತ್ವದ ವರದಿಯನ್ನು ಸರ್ಕಾರ ಅಧಿಕಾರಾವಧಿ ಅಂತ್ಯಕ್ಕೆ ಒಂದು ದಿನ ಮುಂಚಿತವಾಗಿ ಸ್ವೀಕರಿಸಿದ್ದು, ನಂತರ ಹೈಕೋರ್ಟ್ ವರದಿಯನ್ನು ಬಹಿರಂಗಪಡಿಸದಂತೆ ತಡೆ ನೀಡಿದೆ. ವರದಿಗಳ ಹೆಸರಿನಲ್ಲಿ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ಅವರು ಟೀಕಿಸಿದರು.
ಸಾಮಾಜಿಕ-ಆರ್ಥಿಕ ಸಮೀಕ್ಷೆಯಲ್ಲಿ ಸುಮಾರು 4.24 ಲಕ್ಷ ಕುಟುಂಬಗಳು ಭಾಗವಹಿಸಿಲ್ಲ. ಇದೀಗ ಮತ್ತೊಂದು ವರದಿಯನ್ನು ಜಾರಿಗೊಳಿಸುವುದಾಗಿ ಹೇಳುವ ಮೂಲಕ ಸರ್ಕಾರ ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಅವರು, ರೈತರ ಪರಿಸ್ಥಿತಿ ಅತ್ಯಂತ ದುಸ್ಥಿತಿಯಲ್ಲಿದ್ದು, ಅವರನ್ನು ದೇವರೇ ಕಾಪಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಚಿವರು ತಮ್ಮ ಜಿಲ್ಲೆಗಳಿಗೆ ಸಮರ್ಪಕವಾಗಿ ಭೇಟಿ ನೀಡದ ಕಾರಣ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ದೂರಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಎನ್. ರವಿಕುಮಾರ್, ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ಘೋಷಣೆ ಮಾಡಿದ್ದರೂ, ಸಾರಿಗೆ ನಿಗಮಗಳಿಗೆ ಸಮರ್ಪಕ ಅನುದಾನ ನೀಡದ ಪರಿಣಾಮ ಅನೇಕ ಬಸ್‌ಗಳು ಮಧ್ಯ ರಸ್ತೆಯಲ್ಲೇ ಕೆಟ್ಟು ನಿಲ್ಲುತ್ತಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಈ ಎಲ್ಲ ಸಮಸ್ಯೆಗಳ ಕುರಿತು ಜನತೆಗೆ ಉತ್ತರ ನೀಡಬೇಕು. ಒಬಿಸಿ ಸಮುದಾಯದ ಹಕ್ಕುಗಳ ರಕ್ಷಣೆಗಾಗಿ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅನಿಲ್ ಕುಮಾರ್ ಮೋಕಾ ನಾಯ್ಡು, ಅಂಬಿಕಾ, ಅಶ್ವಿನಿ ಶಂಕರ್, ವೈ.ಎಂ. ಸತೀಶ್, ಕೆ. ರಾಮಲಿಂಗಪ್ಪ, ಸಂಜಯ್, ರಾಮಕೃಷ್ಣ, ತಿರುಮಲ್, ಉಪ್ಪಾರ್ ಹನುಮೇಶ್, ಸುಗುಣ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles