ವೃದ್ಧರನ್ನು ಚೆನ್ನಾಗಿ ನೋಡಿಕೊಳ್ಳಿ: ನ್ಯಾ.ರಾಜೇಶ್ ಎನ್.ಹೊಸಮನೆ
ಬಳ್ಳಾರಿ: ಹಿರಿಯ ನಾಗರಿಕ ಹಕ್ಕುಗಳಿಗೆ ಕಾನೂನಿನ ರಕ್ಷಣೆ ಇದೆ. ಕುಟುಂಬಸ್ಥರು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನಿನಡಿ ಕ್ರಮ ವಿಧಿಸುವುದಕ್ಕೂ ಹಕ್ಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್.ಎನ್.ಹೊಸಮನೆ ಅವರು ಹೇಳಿದರು.
ಬೆಂಗಳೂರು ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ (ರಿ), ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ 14567, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿರಿಯ ನಾಗರಿಕರ ಸಹಾಯವಾಣಿ 1090 ಇವರ ಸಂಯುಕ್ತಾಶ್ರಯದಲ್ಲಿ ನಗರದ ಗಾಂಧಿನಗರ ಪೊಲೀಸ್ ಠಾಣೆಯ ಆವರಣದಿಂದ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಶೋಷಣೆ ವಿರುದ್ಧ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿದ್ದು, ಯುವ ಪೀಳಿಗೆಯು ವೃದ್ಧರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದರು.
ಹಿರಿಯರು ಶೋಷಣೆಗೆ ಒಳಗಾಗುತ್ತಿದ್ದಲ್ಲಿ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ 14567 ಹಾಗೂ ಹಿರಿಯ ನಾಗರಿಕರ ಸಹಾಯವಾಣಿ 1090 ಸಂಖ್ಯೆಗೆ ಕರೆಮಾಡಿ ತಿಳಿಸಬಹುದು. ತಕ್ಷಣದಲ್ಲಿ ಪೊಲೀಸರು ಧಾವಿಸಲಿದ್ದಾರೆ. ಇಲ್ಲವಾದಲ್ಲಿ ಕಾನೂನು ಸಲಹೆಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ದೇಶದಲ್ಲಿ ಹಿರಿಯ ನಾಗರಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಆರೋಗ್ಯ, ಸಾಮಾಜಿಕ, ಆಸ್ತಿ ಮತ್ತು ಜೀವ ಉಳಿಸಲು ಅವರಿಗೆ ಅಗತ್ಯ ರಕ್ಷಣೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಾಂಧಿನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಹಾಗೂ ಸ್ಮೈಲ್ ಸಂಸ್ಥೆಯ ಅಧ್ಯಕ್ಷ ಉಮಪತಿಗೌಡ ಕೆ.ಎಮ್, ರಾಷ್ಟ್ರೀಯ ಹಿರಿಯ ಸಹಾಯವಾಣಿ-14567 ಹಾಗೂ ಕ್ಷೇತ್ರ ನಿರ್ವಹಣಾಧಿಕಾರಿ ಮುತ್ತಣ್ಣ.ಜಿ, ಚಿತ್ರದುರ್ಗ ರಾಷ್ಟ್ರೀಯ ಹಿರಿಯ ಸಹಾಯವಾಣಿ-14567 ಹಾಗೂ ಕ್ಷೇತ್ರ ನಿರ್ವಹಣಾಧಿಕಾರಿ ಚಲಪತಿ, ಗದಗ ಕ್ಷೇತ್ರ ಅಧಿಕಾರಿ ವೆಂಕಟೇಶ್, ಬೆಂಗಳೂರು ಐಟಿ ಲೀಡರ್ ಸಿಮಾ ತಾಜ್ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹಿರಿಯ ನಾಗರಿಕರ ಜಾಥಾವು ಗಾಂಧಿ ನಗರ ಪೆÇಲೀಸ್ ಠಾಣೆಯಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನಡೆಯಿತು.