ಬಳ್ಳಾರಿ: ಜ.18ರಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಕುರಿತು ತೆಗೆದುಕೊಂಡು ನಿರ್ಧಾರವನ್ನು ಮಾದಿಗ ಸಮುದಾಯ ಖಂಡಿಸುತ್ತದೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಹೆಚ್.ಹನುಮಂತಪ್ಪ ಅವರು ಹೇಳಿದರು.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಪ್ರಸುತವಾಗಿರುವ 341 ನೇ ವಿಧಿಯ ತಿದ್ದುಪಡಿಯ ಗುಮ್ಮವನ್ನು ತೋರಿಸಿ ಕಾಂಗ್ರೆಸ್ ಮಾದಿಗ. ಸಮುದಾಯಕ್ಕೆ ಮೋಸ ಮಾಡಿದೆ. ಶೇ 15ರ ಮೀನಲಾತಿಯನ್ನು ವರ್ಗೀಕರಿಸಿದ್ದ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಬಗ್ಗೆ ಏನೂ ಮಾಡದ ಸಿದ್ದರಾಮಯ್ಯನವರ ಸರ್ಕಾರ ಈಗ ಕೈಚೆಲ್ಲಿಕೂತಿದೆ. ತನ್ನ ಅಸಹಾಯಕತೆಯನ್ನು ಮುಚ್ಚಿಕೊಳ್ಳಲು ಮಾದಿಗ ದ್ರೋಹಿ ಕಾಂಗ್ರೆಸ್ ಈಗ 2008 ರ ಉಷಾ ಮೆಹ್ರಾ ವರದಿ ಹೇಳಿದಂತೆ ಸಂವಿಧಾನದ 341ವಿಧಿಗೆ ತಿದ್ದುಪಡಿ ತರಬೇಕು. ಅದಕ್ಕಾಗಿ ಕೇಂದ್ರ ಸರಕಾರಕ್ಕೆ ಶಿಫಾರಸು ಪತ್ರ ಬರೆಯುವುದಾಗಿ ಹೇಳುತ್ತಿದೆ ಇದು ಕಪಟ ನಾಟಕವಲ್ಲದೇ ಬೇರೇನು ಅಲ್ಲ ಎಂದರು.2020 ಅಗಸ್ಟ್ 27 ರಂದು ಸುಪ್ರೀಂಕೋರ್ಟಿನ ನ್ಯಾ ಅರುಣ್ ಮಿಶ್ರಾ ನೇತೃತ್ವದ ಪಂಚಪೀಠ ಮೀಸಲಾತಿಯ ವರ್ಗೀಕರಣದ ವಿಷಯದಲ್ಲಿ 341 ನೇ ವಿಧಿಯ ತಿದ್ದುಪಡಿಯ ಅಗತ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ. ಈ ಐತಿಹಾಸಿಕ ತೀರ್ಪು ಸುಪ್ರೀಂಕೋರ್ಟಿನ 7 ಸದಸ್ಯರ ಪೀಠದ ಮುಂದೆ ವಿಚಾರಣೆಗೆ ಬಂದಿರುವಾಗ ವಕೀಲ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹದೊಂದು ಅಗ್ಗದ ನಿರ್ಣಯ ಕೈಗೊಂಡು ನಗೆಪಾಟಲಿಗೆ ಈಡಾಗಿದ್ದಾರೆ. ಸುಪ್ರೀಂಕೋರ್ಟಿನ 7 ಸದಸ್ಯರ ಪೀಠದ ಮುಂದೆ ಕೇಂದ್ರ ಸರ್ಕಾರ ಒಳ ಮೀಸಲಾತಿಯ ಪರವಾಗಿ ಖುದ್ದು ವಕಾಲತ್ತು ವಹಿಸಿರುವಾಗ ಕರ್ನಾಟಕದ ಕಾಂಗ್ರೆಸ್ ಸರಕಾರದ ಈ ಟೊಳ್ಳು ನಿರ್ಣಯಕ್ಕೆ ಯಾರೂ ಮರುಳಾಗುವುದಿಲ್ಲ. ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರೂ ಸೇರಿದಂತೆ ಬಹುತೇಕ ನಾಯಕರಿಗೆ ಒಳ ಮೀಸಲಾತಿಯ ಬಗ್ಗೆ ಯಾವ ಕಾಳಜಿಯೂ ಇಲ್ಲ ಎಂಬುದು ಗುಟ್ಟಿನ ವಿಷಯವಲ್ಲ ಎಂದರು.ಇತ್ತೀಚಿಗೆ ರಾಜ್ಯದೆಲ್ಲೆಡೆ ಮಾದಿಗ ಮುನ್ನಡೆ ಸಮಾವೇಶಗಳ ಅಭೂತಪೂರ್ವ ಯಶಸ್ಸಿನಿಂದ ಕೆಂಗೆಟ್ಟಿರುವ ಕಾಂಗ್ರೆಸ್ಸು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶೋಷಿತ ಸಮಾಜಗಳನ್ನು ದಿಕ್ಕು ತಪ್ಪಿಸಲು ಇಂತಹ ನೀಚ ಕೃತ್ಯಕ್ಕೆ ಕೈಹಾಕಿದೆ. ಕಾಂಗ್ರೆಸ್ಸಿನ ಸಚಿವ ಸಂಪುಟದ ನಿರ್ಣಯವನ್ನು ಮಾದಿಗ ಸಮಾಜದ ನಾಯಕರುಗಳಾದ ನಾವು ಒಕ್ಕೊರಲಿನಿಂದ ದಿಕ್ಕರಿಸುತ್ತೇವೆ ಮತ್ತು ಖಂಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮೇಕಲ ವೀರೇಶ್, ಎ. ಈಶ್ವರಪ್ಪ, ಸೋಮಶೇಖರ್, ನರಸಪ್ಪ, ರಾಜೇಶ್,ಅರುಣಾಚಲ, ಶಂಕರ್,ಮಹಾದೇವಪ್ಪ ಸೇರಿದಂತೆ ಮತ್ತಿತರರು ಇದ್ದರು.