ಬೆಳಗಾಯಿತು ವಾರ್ತೆ | Www.belagayithu.in
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತ್ಯಾನಹು ಅವರಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿ ಕುರಿತು ಚರ್ಚಿಸಿದರು. ಇದೇ ವೇಳೆ, ಯುದ್ಧ ತಕ್ಷಣ ನಿಲ್ಲಿಸುವ ಅಗತ್ಯವಿದೆ ಎಂದು ಭಾರತ ಪುನರುಚ್ಚರಿಸಿರುವುದಾಗಿ ಮೋದಿ ತಿಳಿಸಿದ್ದಾರೆ. ಇಸ್ರೇಲ್, ಅಮೆರಿಕ ದಾಳಿಗೆ ಪ್ರತಿಯಾಗಿ ಇರಾನ್ ಕ್ಷಿಪಣಿ ದಾಳಿ ಮುಂದುವರಿಸಿರುವ ಹಿನ್ನೆಲೆ ಪ್ರಾದೇಶಿಕ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ, ಇತ್ತೀಚಿನ ಬೆಳವಣಿಗೆಗಳ ಕುರಿತು ಭಾರತದ ಕಳವಳಗಳನ್ನು ಬೆಂಜಮಿನ್ ನೆತ್ಯಾನಹುಗೆ ತಿಳಿಸಿದ್ದೇನೆ. ನಾಗರಿಕರ ಸುರಕ್ಷತೆ ಮೊದಲ ಆದ್ಯತೆಯಾಗಿದೆ ಎಂಬುದನ್ನು ಒತ್ತಿ ಹೇಳಿದ್ದೇನೆ. ಯುದ್ಧವನ್ನು ಬೇಗನೆ ನಿಲ್ಲಿಸುವ ಅಗತ್ಯವನ್ನು ಭಾರತ ಪುನರುಚ್ಚರಿಸಿದೆ ಎಂದು ತಿಳಿಸಿದ್ದಾರೆ.





