ಬೆಳಗಾಯಿತು ವಾರ್ತೆ
ಬಳ್ಳಾರಿ: ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಶೀಘ್ರ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಬ್ಯಾಂಕ್ ನೌಕರರು ಬೃಹತ್ ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸಿದರು.
ನಗರದ ಕೆನರಾ ಬ್ಯಾಂಕ್ ರಾಯಲ್ ಸರ್ಕಲ್ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಎಸ್ಬಿಐ ಮುಖ್ಯ ಶಾಖೆವರೆಗೆ ಸಾಗಿತು. 900ಕ್ಕೂ ಅಧಿಕ ಬ್ಯಾಂಕ್ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಮಾತನಾಡಿದ UFBU ಮುಖಂಡರು, ಬ್ಯಾಂಕ್ ನೌಕರರ ಬಹುಕಾಲದ ಬೇಡಿಕೆಯಾಗಿರುವ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಯಾವುದೇ ವಿಳಂಬವಿಲ್ಲದೆ ಜಾರಿಗೊಳಿಸಬೇಕು ಎಂದು ಸರ್ಕಾರ ಹಾಗೂ ಬ್ಯಾಂಕ್ ಆಡಳಿತ ಮಂಡಳಿಗಳನ್ನು ಒತ್ತಾಯಿಸಿದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೌಕರರು ಸಲ್ಲಿಸುತ್ತಿರುವ ಸೇವೆ ಹಾಗೂ ಕೊಡುಗೆಯನ್ನು ಪರಿಗಣಿಸಿ, ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಅದೇ ರೀತಿ, ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಕಾರ್ಯಕ್ಷಮತೆಗೆ ಅನುಗುಣವಾಗಿ ಸಮಾನ ಹಾಗೂ ನ್ಯಾಯಸಮ್ಮತ Performance Linked Incentive (PLI) ವ್ಯವಸ್ಥೆ ಜಾರಿಗೊಳಿಸಬೇಕು. ನೌಕರರ ಪರಿಶ್ರಮಕ್ಕೆ ತಕ್ಕ ಪ್ರೋತ್ಸಾಹ ದೊರೆತರೆ ಬ್ಯಾಂಕಿಂಗ್ ಕ್ಷೇತ್ರದ ಕಾರ್ಯಕ್ಷಮತೆ ಮತ್ತಷ್ಟು ಹೆಚ್ಚಲಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.
ಪ್ರತಿಭಟನೆಯಲ್ಲಿ UFBU ಮುಖಂಡರಾದ ಆರ್. ಘನಮಲ್ಲಿ, ಆರ್.ಎಚ್. ಸೂರಜ್, ರಾಮಕೃಷ್ಣ ದೇವರ, ನಿಸರ್ ಅಹಮದ್, ಪಿ. ಧರ್ಮೇಂದ್ರ, ಮಧುಸೂದನ್ ರೆಡ್ಡಿ, ಇಂಡಿಯನ್ ಬ್ಯಾಂಕ್ನ ರವಿ, ಶಿವರಾಜ್, ಪ್ರವೀಣ್ ಕುಮಾರ್, ಪ್ರತಾಪ್, ಎಫ್. ಮಂಜುಳ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಗ್ರಾಮೀಣ ಬ್ಯಾಂಕ್ ನೌಕರರ ಮುಖಂಡರಾದ ಶರಣಗೌಡ, ಪ್ರದೀಪ್, ನಾಗೇಂದ್ರ, ಗಂಗಣ್ಣ ಪತ್ತಾರ್ ಸೇರಿದಂತೆ ವಿವಿಧ ಬ್ಯಾಂಕ್ಗಳ ನೌಕರರು ಹಾಗೂ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ಯಶಸ್ವಿಗೊಳಿಸಿದರು.
ಬ್ಯಾಂಕ್ ನೌಕರರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಮತ್ತು ಬ್ಯಾಂಕ್ ಆಡಳಿತಗಳು ಗಂಭೀರವಾಗಿ ಪರಿಗಣಿಸಿ, ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.





