ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದ ಜಿಲ್ಲಾಸ್ಪತ್ರೆಯ ಹೊರಭಾಗದಲ್ಲಿ ಸಣ್ಣ ಮಕ್ಕಳ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳ ಬಂಡಿಗಳನ್ನು ಮಹಾನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದು, ಇದರಿಂದ ಬಡ ವ್ಯಾಪಾರಿಗಳು ಜೀವನೋಪಾಯಕ್ಕಾಗಿ ಪರದಾಡುವಂತಾಗಿದೆ.
ಜಿಲ್ಲಾಸ್ಪತ್ರೆಗೆ ಪ್ರತಿನಿತ್ಯ ನೂರಾರು ಜನರು ಆಗಮಿಸುತ್ತಿದ್ದು, ಆಸ್ಪತ್ರೆಯ ಹೊರಭಾಗದಲ್ಲಿ ಸಣ್ಣ ಮಕ್ಕಳ ಬಟ್ಟೆಗಳನ್ನು ಮಾರಾಟ ಮಾಡುವ ಮೂಲಕ ಕೆಲ ಬಡ ಕುಟುಂಬಗಳು ಜೀವನ ಸಾಗಿಸುತ್ತಿದ್ದವು. ಆದರೆ ಮಹಾನಗರ ಪಾಲಿಕೆ ಸಿಬ್ಬಂದಿ ಏಕಾಏಕಿ ವ್ಯಾಪಾರಿಗಳ ಬಂಡಿಗಳನ್ನು ತೆರವುಗೊಳಿಸಿರುವುದರಿಂದ ಇದೀಗ ವ್ಯಾಪಾರ ಮಾಡಲು ಸ್ಥಳವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ.
ಸಣ್ಣ ಪ್ರಮಾಣದ ಬಂಡಿಗಳ ಮೂಲಕ ಮಕ್ಕಳ ಬಟ್ಟೆಗಳನ್ನು ಮಾರಾಟ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ನಮಗೆ ಬೇರೆ ಯಾವುದೇ ಆದಾಯದ ಮೂಲವಿಲ್ಲ. ಬಂಡಿಗಳನ್ನು ತೆರವುಗೊಳಿಸಿದ ನಂತರ ವ್ಯಾಪಾರ ಮಾಡಲಾಗದೆ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ವ್ಯಾಪಾರಿಗಳು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಗರದ ಸ್ವಚ್ಛತೆ, ಸಂಚಾರ ವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದು ಅಗತ್ಯ. ಆದರೆ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೂ ತೊಂದರೆಯಾಗದ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂಬುದು ವ್ಯಾಪಾರಿಗಳ ಮನವಿಯಾಗಿದೆ





