ಹಾಲು ಒಕ್ಕೂಟದಲ್ಲಿ ₹16.5 ಕೋಟಿ ಅಕ್ರಮದ ಆರೋಪ: ತನಿಖೆಗೆ ಧನುಂಜಯ ಹಮಲ್ ಆಗ್ರಹ

ಸತ್ತ ಜಾನುವಾರುಗಳ ವಿಮೆ ಹಾಗೂ ರೈತ ಕಲ್ಯಾಣ ಟ್ರಸ್ಟ್‌ ಹಣ ದುರುಪಯೋಗದ ಶಂಕೆ; ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಒತ್ತಾಯ
ಬೆಳಗಾಯಿತು ವಾರ್ತೆ
ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಲ್ಲಿ ಸತ್ತ ಜಾನುವಾರುಗಳ ವಿಮೆ ಹಾಗೂ ರೈತ ಕಲ್ಯಾಣ ಟ್ರಸ್ಟ್‌ಗೆ ಸಂಬಂಧಿಸಿದ ಸುಮಾರು ₹16.5 ಕೋಟಿ ಹಣವನ್ನು ಅರ್ಹ ರೈತರಿಗೆ ಪಾವತಿಸದೆ, ಇತರರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಮಾಜಿ ನಾಮನಿರ್ದೇಶಿತ ಸದಸ್ಯ ಎನ್. ಧನುಂಜಯ ಹಮಲ್ ಆಗ್ರಹಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಿಂದ 2026ರವರೆಗಿನ ಅವಧಿಯಲ್ಲಿ ಕೆಎಂಎಫ್ ಬಳ್ಳಾರಿ ಒಕ್ಕೂಟಕ್ಕೆ ಹಾಲು ಪೂರೈಸುವ ರೈತರ ಜಾನುವಾರುಗಳಿಗೆ ಖಾಸಗಿ ವಿಮಾ ಕಂಪನಿಗಳ ಮೂಲಕ ವಿಮೆ ಮಾಡಿಸಲಾಗುತ್ತಿತ್ತು. ಈ ವಿಮೆಯ ಪ್ರೀಮಿಯಂ ಮೊತ್ತದಲ್ಲಿ ಶೇ.60ರಷ್ಟು ಹಣವನ್ನು ಕೆಎಂಎಫ್ ಒಕ್ಕೂಟ ಹಾಗೂ ಶೇ.40ರಷ್ಟು ಹಣವನ್ನು ರೈತರು ಪಾವತಿಸುತ್ತಿದ್ದರು. ಜಾನುವಾರುಗಳು ಮೃತಪಟ್ಟ ಸಂದರ್ಭದಲ್ಲಿ ವಿಮಾ ಕಂಪನಿಗಳಿಂದ ಬಿಡುಗಡೆಯಾಗುವ ಪರಿಹಾರ ಮೊತ್ತವನ್ನು ಸಂಬಂಧಪಟ್ಟ ರೈತರಿಗೆ ಪಾವತಿಸಬೇಕಾಗಿತ್ತು ಎಂದು ತಿಳಿಸಿದರು.

ಆದರೆ, ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಶಂಕೆಯಿದ್ದು, ಸತ್ತ ಜಾನುವಾರುಗಳ ವಿಮೆ ಹಾಗೂ ಕೆಎಂಎಫ್ ಬಳ್ಳಾರಿಯ ರೈತ ಕಲ್ಯಾಣ ಟ್ರಸ್ಟ್‌ನ ಹಣ ಸೇರಿದಂತೆ ಒಟ್ಟು ಸುಮಾರು ₹16.5 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಅರ್ಹ ರೈತರಿಗೆ ನೀಡದೆ, ಇತರ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿದರು.

ರೈತರ ಜಾನುವಾರುಗಳಿಗೆ ವಿಮೆ ಮಾಡಿಸುವ ಉದ್ದೇಶವೇ ಅನಿರೀಕ್ಷಿತ ನಷ್ಟದ ಸಂದರ್ಭದಲ್ಲಿ ಅವರಿಗೆ ಆರ್ಥಿಕ ನೆರವು ಒದಗಿಸುವುದಾಗಿದೆ. ಆದರೆ, ರೈತರಿಗೆ ಸೇರಬೇಕಾದ ಹಣವೇ ಅವರಿಗೆ ತಲುಪದಿದ್ದರೆ, ಅದು ರೈತರ ಹಿತಾಸಕ್ತಿಗೆ ಧಕ್ಕೆಯುಂಟುಮಾಡುತ್ತದೆ. ಈ ಪ್ರಕರಣದಲ್ಲಿ ರೈತರಿಗೆ ಹಾಗೂ ಹಾಲು ಒಕ್ಕೂಟಕ್ಕೆ ಅನ್ಯಾಯವಾಗಿರುವ ಕುರಿತು ಸಮಗ್ರ ತನಿಖೆ ನಡೆಸಿ, ದಾಖಲೆಗಳು ಮತ್ತು ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸಬೇಕು ಎಂದರು.
ಜಾನುವಾರುಗಳ ವಿಮೆ ಪ್ರಕರಣದಲ್ಲಿ ಒಟ್ಟು ವಿಮೆ ಮಾಡಿಸಲಾದ ಜಾನುವಾರುಗಳಲ್ಲಿ ಕೇವಲ ಶೇ.25ರಷ್ಟು ಜಾನುವಾರುಗಳು ಮಾತ್ರ ಮೃತಪಟ್ಟಿದ್ದು, ಉಳಿದ ಶೇ.75ರಷ್ಟು ಜಾನುವಾರುಗಳು ಮೃತಪಟ್ಟಿವೆ ಎಂದು ತೋರಿಸಿರುವ ದಾಖಲೆಗಳು ಬೋಗಸ್ ಆಗಿರುವ ಶಂಕೆಯಿದೆ ಎಂದು ಆರೋಪಿಸಿದರು.

2018ರಿಂದ 2026ರವರೆಗಿನ ವಿಮಾ ಪರಿಹಾರ ವಿತರಣೆ, ರೈತ ಕಲ್ಯಾಣ ಟ್ರಸ್ಟ್‌ನ ಹಣಕಾಸು ವ್ಯವಹಾರಗಳು ಹಾಗೂ ಸಂಬಂಧಪಟ್ಟ ಬ್ಯಾಂಕ್ ಖಾತೆಗಳ ಕುರಿತು ಸಮಗ್ರ ಲೆಕ್ಕಪರಿಶೋಧನೆ ನಡೆಸಬೇಕು. ಆರೋಪಗಳು ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಅಕ್ರಮವಾಗಿ ವರ್ಗಾವಣೆಯಾಗಿರುವ ಹಣವನ್ನು ವಸೂಲಿ ಮಾಡಿ ಅರ್ಹ ರೈತರಿಗೆ ಹಾಗೂ ಒಕ್ಕೂಟಕ್ಕೆ ನ್ಯಾಯ ಒದಗಿಸಬೇಕು ಎಂದು ಎನ್. ಧನುಂಜಯ ಹಮಲ್ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಧಾ ಶಿವ ರೆಡ್ಡಿ,ಬಸವನ ಗೌಡ,ಪ್ರಭಾಕರ್ ರೆಡ್ಡಿ,ಉಮಾಪತಿ, ತಿಮ್ಮರೆಡ್ಡಿ, ಬಸವರಾಜ್ ಸ್ವಾಮಿ,ರಾಮು ಗೌಡ,ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles