ಬಳ್ಳಾರಿಯಲ್ಲಿ ಕನ್ನಡ ಧ್ವಜಕಟ್ಟೆ, ಡಾ. ರಾಜ್ ಮಹಾದ್ವಾರ ನಿರ್ಮಾಣಕ್ಕೆ ಆಗ್ರಹ

ಪುನೀತ್ ರಾಜ್‌ಕುಮಾರ್ ಪುತ್ಥಳಿ ಸ್ಥಳದ ಅಭಿವೃದ್ಧಿ, ಉದ್ಯಾನವನಗಳ ಸುಧಾರಣೆ ಹಾಗೂ ಹಿರಿಯ ಕನ್ನಡಪರ ಹೋರಾಟಗಾರರಿಗೆ ಗೌರವ ಸಲ್ಲಿಸಲು ಮನವಿ
ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದ ವಿವಿಧೆಡೆ ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದು, ವರನಟ ಡಾ. ರಾಜ್‌ಕುಮಾರ್ ಹಾಗೂ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ಸ್ಮರಣೆಯನ್ನು ಗೌರವಯುತವಾಗಿ ಉಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕನ್ನಡಪರ ಅಭಿಮಾನಿಗಳು ಜಿಲ್ಲಾಧಿಕಾರಿ ಬಿ. ನಾಗೇಂದ್ರ ಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ಅನಂತಪುರ ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದ ಅವರು, ನಗರದ ಹೃದಯಭಾಗದಲ್ಲಿರುವ ಸಂಗಮ ವೃತ್ತದಲ್ಲಿ ಕನ್ನಡ ಧ್ವಜಕಟ್ಟೆ ನಿರ್ಮಿಸಿ, ನಿರಂತರವಾಗಿ ಕನ್ನಡ ಧ್ವಜ ಹಾರಾಡುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಡಾ. ರಾಜ್‌ಕುಮಾರ್ ಹೆಸರಿನಲ್ಲಿ ಮಹಾದ್ವಾರ ನಿರ್ಮಿಸಿ
ಗಡಿಗಿ ಚನ್ನಪ್ಪ ವೃತ್ತದಿಂದ ಎಂ.ಜಿ. ರಸ್ತೆಯವರೆಗೆ ಡಾ. ರಾಜ್‌ಕುಮಾರ್ ಅವರ ಹೆಸರನ್ನು ನಾಮಕರಣ ಮಾಡಲಾಗಿದ್ದರೂ, ಸೂಕ್ತ ನಾಮಫಲಕಗಳಿಲ್ಲದಿರುವುದರಿಂದ ಗಡಿಗಿ ಚನ್ನಪ್ಪ ವೃತ್ತದಲ್ಲಿ ಅವರ ಹೆಸರಿನಲ್ಲಿ ಮಹಾದ್ವಾರ ನಿರ್ಮಿಸಿ ಕನ್ನಡಿಗರ ಅಭಿಮಾನಿ ನಟನಿಗೆ ಗೌರವ ಸಲ್ಲಿಸಬೇಕು ಎಂದು ಮನವಿಯಲ್ಲಿ ಕೋರಿದರು.
ನಗರದಲ್ಲಿರುವ ಡಾ. ರಾಜ್‌ಕುಮಾರ್ ಉದ್ಯಾನವನವನ್ನು ಅಭಿವೃದ್ಧಿಪಡಿಸಿ, ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಉದ್ಯಾನವನದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪುನೀತ್ ಪುತ್ಥಳಿ ಸ್ಥಳಕ್ಕೆ ಮೂಲಸೌಕರ್ಯ ಕಲ್ಪಿಸಲು ಮನವಿ
ಜಿಲ್ಲಾ ಕ್ರೀಡಾಂಗಣದಲ್ಲಿರುವ ಕರ್ನಾಟಕ ರತ್ನ, ಕೊಡುಗೈ ದಾನಿ ಡಾ. ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿ ಸ್ಥಳದಲ್ಲಿ ಸಾರ್ವಜನಿಕರು ಗೌರವ ಸಲ್ಲಿಸಲು ಅನುಕೂಲವಾಗುವಂತೆ ಮೆಟ್ಟಿಲು ಅಥವಾ ಏಣಿ ನಿರ್ಮಿಸಬೇಕು. ಅಲ್ಲಿನ ಕೆರೆಯನ್ನು ಅಭಿವೃದ್ಧಿಪಡಿಸಿ, ಕಾವಲುಗಾರರನ್ನು ನೇಮಿಸಬೇಕು ಎಂದು ಮನವಿದಾರರು ಒತ್ತಾಯಿಸಿದರು.
ಸ್ಥಳದಲ್ಲಿ ಆಹಾರ ಮಳಿಗೆಗಳನ್ನು ಸ್ಥಾಪಿಸುವುದು, ಗಿಡಗಳನ್ನು ನೆಟ್ಟು ಹಸಿರು ಪರಿಸರ ನಿರ್ಮಿಸುವುದು, ಮಕ್ಕಳಿಗಾಗಿ ಆಟದ ಸಾಮಗ್ರಿಗಳನ್ನು ಅಳವಡಿಸುವುದು ಹಾಗೂ ಸಾರ್ವಜನಿಕರು ಕುಳಿತುಕೊಳ್ಳಲು ಬೆಂಚುಗಳನ್ನು ಹಾಕಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಬೆಳಕಿನ ಕೊರತೆ ನೀಗಿಸಲು ಹೆಚ್ಚುವರಿ ವಿದ್ಯುತ್ ದೀಪಗಳನ್ನು ಅಳವಡಿಸಿ, ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಹಿರಿಯ ಕನ್ನಡಪರ ಹೋರಾಟಗಾರರಿಗೆ ಗೌರವ ಸಲ್ಲಿಸಲು ಆಗ್ರಹ
ಈ ಬಾರಿಯ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಭಾಷೆ, ನಾಡು-ನುಡಿಯ ಉಳಿವಿಗಾಗಿ ಶ್ರಮಿಸಿದ ಹಿರಿಯ ಕನ್ನಡಪರ ಹೋರಾಟಗಾರರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಬಳ್ಳಾರಿ ನಗರದ ಬಿ.ಡಿ.ಎ. ಮೈದಾನಕ್ಕೆ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.
ನಗರದಲ್ಲಿ ಕನ್ನಡದ ಸಾಂಸ್ಕೃತಿಕ ಗುರುತುಗಳನ್ನು ಉಳಿಸಿ ಬೆಳೆಸುವ ಹಾಗೂ ಕನ್ನಡಪರ ಅಭಿಮಾನಿಗಳ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿದಾರರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಎಸ್. ಹರ್ಷದ್ ಅಲಿ, ಪಾಲಿಕೆ ಸದಸ್ಯ ಗುಡಿಗಂಟಿ ಹನುಮಂತ, ಅಪ್ಪು ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಜೆ.ಪಿ. ಮಂಜು, ಬಸವರಾಜ್, ಕೋರಿ ಚಂದ್ರಶೇಖರ್, ಸುಜಿತ್, ಅಪ್ಪು ರವಿ, ವೆಂಕಟೇಶ್, ಕುಮಾರ್, ಗಣೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles