ಪ್ರಜ್ವಲ್ ರೇವಣ್ಣ ಜೈಲು ಸ್ಥಳಾಂತರ ವಿಚಾರ; ರಾಜಕೀಯ ಒತ್ತಡದ ಶಂಕೆ

ಬೆಳಗಾಯಿತು ವಾರ್ತೆ

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೈಲಿನಿಂದ ಸ್ಥಳಾಂತರಿಸುವ ವಿಚಾರ ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲು ಆದೇಶಿಸಲಾಗಿದ್ದರೂ, ಬಳಿಕ ಆ ಆದೇಶವನ್ನು ಹಿಂಪಡೆಯಲಾಗಿದ್ದು, ರಾಜಕೀಯ ಒತ್ತಡದ ಅನುಮಾನಗಳು ವ್ಯಕ್ತವಾಗಿವೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪ್ರಜ್ವಲ್ ರೇವಣ್ಣ ಇದ್ದ ಕೊಠಡಿಯಲ್ಲಿ ಮೊಬೈಲ್ ಪತ್ತೆಯಾದ ಹಿನ್ನೆಲೆಯಲ್ಲಿ, ಅವರನ್ನು ತಕ್ಷಣವೇ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವಂತೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದರು. ಆದರೆ, ಹಿಂಡಲಗಾ ಜೈಲಿನಲ್ಲಿ ಭದ್ರತೆ ಒದಗಿಸುವುದಕ್ಕೆ ಸಂಬಂಧಿಸಿದ ಸಮಸ್ಯೆಗಳ ಹಿನ್ನೆಲೆಯಲ್ಲಿ ಸ್ಥಳಾಂತರ ಆದೇಶವನ್ನು ವಾಪಸ್ ಪಡೆಯಲಾಗಿತ್ತು.

ಶಿರಾವರೆಗೂ ಕರೆದೊಯ್ದಿದ್ದ ಪೊಲೀಸರು

ತಕ್ಷಣ ಜೈಲು ಸ್ಥಳಾಂತರಿಸುವ ಆದೇಶ ಬಂದ ಹಿನ್ನೆಲೆಯಲ್ಲಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಸಿಬ್ಬಂದಿ ಪ್ರಜ್ವಲ್ ರೇವಣ್ಣ ಅವರನ್ನು ಕರೆದುಕೊಂಡು ಹಿಂಡಲಗಾ ಜೈಲಿನತ್ತ ಪ್ರಯಾಣ ಬೆಳೆಸಿದ್ದರು. ಆದರೆ, ಶಿರಾ ಸಮೀಪ ತಲುಪಿದಾಗ ಹಿರಿಯ ಅಧಿಕಾರಿಗಳಿಂದ ವಾಪಸ್ ಬರುವಂತೆ ಸೂಚನೆ ಬಂದ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಬೆಂಗಳೂರಿಗೆ ಕರೆತರಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಾಜಕೀಯ ಒತ್ತಡದ ಶಂಕೆ; ಭದ್ರತೆ ಕಾರಣ ಎಂದ ಅಲೋಕ್ ಕುಮಾರ್

ಪ್ರಜ್ವಲ್ ರೇವಣ್ಣ ಅವರನ್ನು ಶಿರಾವರೆಗೂ ಕರೆದೊಯ್ದು ಅಲ್ಲಿಂದ ವಾಪಸ್ ಕರೆತಂದಿರುವುದರ ಹಿಂದೆ ರಾಜಕೀಯ ಒತ್ತಡವಿದೆಯೇ ಎಂಬ ಚರ್ಚೆ ಆರಂಭವಾಗಿದೆ. ಆದರೆ, ಈ ಕುರಿತು ವಾರ್ತಾ ಭಾರತಿಯೊಂದಿಗೆ ಮಾತನಾಡಿದ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್, ಹಿಂಡಲಗಾ ಜೈಲಿನ ಸೂಪರಿಂಟೆಂಡೆಂಟ್ ಪ್ರಜ್ವಲ್ ರೇವಣ್ಣ ಅವರಿಗೆ ಭದ್ರತೆ ಒದಗಿಸುವುದಕ್ಕೆ ಸಂಬಂಧಿಸಿದ ತೊಡಕುಗಳನ್ನು ವಿವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಾಂತರ ಆದೇಶವನ್ನು ಹಿಂಪಡೆಯಲಾಗಿದೆ. ಪರ್ಯಾಯ ಕ್ರಮಗಳ ಕುರಿತು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles