ಯೋಗಾಭ್ಯಾಸದಿಂದ ಒತ್ತಡ ನಿವಾರಣೆ ಸಾಧ್ಯ; ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಜಾಗೃತಿ
ಬೆಳಗಾಯಿತು ವಾರ್ತೆ
ತುರುವೇಕೆರೆ: ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮಹತ್ವದ್ದಾಗಿದ್ದು, ದೈನಂದಿನ ಜೀವನದಲ್ಲಿ ಉಂಟಾಗುವ ಒತ್ತಡವನ್ನು ನಿವಾರಿಸಲು ಯೋಗಾಭ್ಯಾಸ ಸಹಕಾರಿಯಾಗಿದೆ ಎಂದು ತುರುವೇಕೆರೆ ಭಾಗದಲ್ಲಿ ‘ವೈದ್ಯ ಬ್ರಹ್ಮ’ ಎಂದೇ ಜನಪ್ರಿಯರಾಗಿರುವ ಡಾ. ಎ. ನಾಗರಾಜು ಹೇಳಿದರು.
ಪಟ್ಟಣದ ವಿರಕ್ತಮಠ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್‌ನಲ್ಲಿ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಸಹಯೋಗದಲ್ಲಿ, ಪ್ರಧಾನ ತನಿಖಾಧಿಕಾರಿ ಡಾ. ಆರತಿ ಜಗನ್ನಾಥನ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಯೋಗ ಆಧಾರಿತ ವಿಸ್ತರಣಾ ಸೇವೆ (YES) ಯೋಜನೆಯಡಿ ಗುರುವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ವರ್ಷದ ಘೋಷವಾಕ್ಯವಾದ ‘ಅನುಭವಗಳಿಗೆ ಕಿವಿಯಾಗೋಣ: ನೈಜ ಧ್ವನಿಗಳು, ನೈಜ ಬದಲಾವಣೆ’ ಕುರಿತು ಮಾತನಾಡಿದ ಅವರು, ಮಾನಸಿಕ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಒತ್ತಡದ ಸಂದರ್ಭಗಳಲ್ಲಿ ಯೋಗಾಭ್ಯಾಸದ ಮೂಲಕ ಮನಸ್ಸಿನ ನೆಮ್ಮದಿ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ನಿಮ್ಹಾನ್ಸ್‌ನ YES ಯೋಜನೆಯ ವತಿಯಿಂದ ಡಾ. ಎ. ನಾಗರಾಜು ಅವರನ್ನು ಸನ್ಮಾನಿಸಲಾಯಿತು.
ಮಾನಸಿಕ ಆರೋಗ್ಯದ ಕುರಿತು ಜಾಗೃತಿ
ಯೋಜನೆಯ ಸಂಶೋಧನಾ ವಿಜ್ಞಾನಿ ಪೂನಮ್ ಸಿಂಗ್ ಅವರ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ YES ಯೋಜನೆಯ ಸಾಮಾಜಿಕ ಕಾರ್ಯಕರ್ತೆ ರೂಪಾ ಎಸ್. ಅವರು ಯೋಜನೆಯ ಉದ್ದೇಶ, ತುರುವೇಕೆರೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಹಾಗೂ ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಮಾನಸಿಕ ಆರೋಗ್ಯದ ಲಕ್ಷಣಗಳು, ಮಾನಸಿಕ ಕಾಯಿಲೆಗಳ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳು ಮತ್ತು ಕಳಂಕ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿದರು.
ಸಾಮಾಜಿಕ ಕಾರ್ಯಕರ್ತ ಅನಿಲ್ ಆರ್. ಅವರು ಮಾನಸಿಕ ಕಾಯಿಲೆಗಳ ಪ್ರಮುಖ ಲಕ್ಷಣಗಳು, ವ್ಯಸನ, ದೈಹಿಕ ಮತ್ತು ಸಾಮಾಜಿಕ ಒತ್ತಡ, ಒತ್ತಡ ನಿರ್ವಹಣೆ, ಸ್ವಯಂ ಆರೈಕೆ ಹಾಗೂ ಭಾವನಾತ್ಮಕ ಬೆಂಬಲದ ಮಹತ್ವದ ಕುರಿತು ತಿಳಿಸಿದರು. ಯುವಜನರಲ್ಲಿ ಮಾದಕ ವಸ್ತುಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು ಮತ್ತು ಅರಿವಿನ ಕೊರತೆಯ ಕುರಿತು ಸಂವಾದ ನಡೆಸಿ, ಅವುಗಳ ಸೇವನೆಯಿಂದ ದೈಹಿಕ, ಮಾನಸಿಕ, ಶೈಕ್ಷಣಿಕ ಹಾಗೂ ಕೌಟುಂಬಿಕ ಆರ್ಥಿಕ ಪರಿಸ್ಥಿತಿಯ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ಯೋಗದಿಂದ ಮನಸ್ಸು-ದೇಹದ ಸಮತೋಲನ
ಡಾ. ವಿಭಾ ಎಸ್. ಗುಪ್ತ ಅವರು ಮಾನಸಿಕ ಆರೋಗ್ಯ ಸುಧಾರಣೆಯಲ್ಲಿ ಯೋಗದ ಪಾತ್ರ, ಅದರ ಪ್ರಯೋಜನಗಳು ಹಾಗೂ ಭಾವನೆಗಳ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು. ಬಳಿಕ ಸಾರ್ವಜನಿಕರಿಗೆ ಯೋಗಾಭ್ಯಾಸ ಮಾಡಿಸಿ, ಯೋಗವು ಮನಸ್ಸು, ದೇಹ ಮತ್ತು ಆತ್ಮದ ನಡುವೆ ಸಮತೋಲನ ಸಾಧಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಪಟ್ಟಣ ಪಂಚಾಯಿತಿಯ VRW ಮತ್ತು MRW ಸಿಬ್ಬಂದಿ, ಮಾಜಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ CHO ಹಾಗೂ PHCO ಸಿಬ್ಬಂದಿ ಸೇರಿದಂತೆ ತುರುವೇಕೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಭಾಗವಹಿಸಿದ್ದರು.





