ಜನರೇಟರ್, ಯುಪಿಎಸ್ ಇದ್ದರೂ ವಿದ್ಯುತ್ ಕಡಿತದ ವೇಳೆ ಬೆಳಕಿಲ್ಲ; ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಆಕ್ರೋಶ
ಬೆಳಗಾಯಿತು ವಾರ್ತೆ
ತೆಕ್ಕಲಕೋಟೆ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವಿದ್ಯುತ್ ಕಡಿತಗೊಂಡ ಪರಿಣಾಮ ಬಾಣಂತಿಯರು ಹಾಗೂ ನವಜಾತ ಶಿಶುಗಳು ಪರದಾಡಿದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೊಬೈಲ್ ಟಾರ್ಚ್ಗಳೇ ಆಸರೆ!
ವಿದ್ಯುತ್ ಇಲ್ಲದೆ ಫ್ಯಾನ್ಗಳು ಸ್ಥಗಿತಗೊಂಡು ವಾರ್ಡ್ನಲ್ಲಿ ಕತ್ತಲು ಆವರಿಸಿತ್ತು. ಬಿಸಿಲಿನ ಶಾಖ ಹಾಗೂ ಸೊಳ್ಳೆಗಳ ಕಾಟದಿಂದ ತೊಂದರೆಗೊಳಗಾದ ಬಾಣಂತಿಯರು, ಮಕ್ಕಳಿಗೆ ಸೀರೆಯ ಸೆರಗಿನಿಂದ ಗಾಳಿ ಬೀಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕತ್ತಲನ್ನು ದೂರ ಮಾಡಲು ಮೊಬೈಲ್ ಟಾರ್ಚ್ಗಳನ್ನು ಬಳಸಬೇಕಾಯಿತು.
ವ್ಯವಸ್ಥೆ ಇದ್ದರೂ ಕಾರ್ಯನಿರ್ವಹಿಸಲಿಲ್ಲವೇ?
ಆಸ್ಪತ್ರೆಯಲ್ಲಿ ಜನರೇಟರ್ ಹಾಗೂ ಐದಾರು ಯುಪಿಎಸ್ ಬ್ಯಾಟರಿಗಳಿವೆ. ಆದರೂ ವಿದ್ಯುತ್ ಕಡಿತದ ವೇಳೆ ಸಮಸ್ಯೆ ಉಂಟಾಗಿದ್ದು ಹೇಗೆ ಎಂಬುದು ತಿಳಿದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಲಕನಂದ ಡಿ. ಮಾಳಗಿ ತಿಳಿಸಿದ್ದಾರೆ. ಈ ಕುರಿತು ವರದಿ ಕೇಳಿದ್ದು, ಪರಿಶೀಲನೆ ಬಳಿಕ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಬಾಣಂತಿಯರು ಮತ್ತು ನವಜಾತ ಶಿಶುಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ವ್ಯವಸ್ಥೆ, ಫ್ಯಾನ್ಗಳು ಹಾಗೂ ಸೊಳ್ಳೆ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು. ಕರ್ತವ್ಯ ಲೋಪ ಕಂಡುಬಂದಲ್ಲಿ ಹೊಣೆಗಾರರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





