ಬೆಳಗಾಯಿತು ವಾರ್ತೆ
ಬಳ್ಳಾರಿ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ತಾಳೂರು ರಸ್ತೆಯ ನಡುಬೀದಿಯಲ್ಲಿ ನಡೆದಿದೆ.
ಮಧು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ.
ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಆಗಾಗ್ಗೆ ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಇತ್ತೀಚೆಗೆ ವಾಟ್ಸ್‌ಆ್ಯಪ್‌ನಲ್ಲಿ ಪರಸ್ಪರ ಬೈದಾಡಿಕೊಂಡಿದ್ದೇ ಮತ್ತೆ ಗಲಾಟೆ ನಡೆಯಲು ಕಾರಣವಾಗಿದೆ ಎಂದು ತಿಳಿದುಬಂದಿದೆ.
ಈ ವೇಳೆ ಮಧು ಅವರ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಹಲ್ಲೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





