ಗುರಿ ಸಾಧನೆಗೆ ಶ್ರಮ ಮತ್ತು ಗುರುವಿನ ಮಾರ್ಗದರ್ಶನ ಅಗತ್ಯ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಾಗಾರ
ಬೆಳಗಾಯಿತು ವಾರ್ತೆ
ಸಂಡೂರು: ನಗರದ ಎಸ್‌ಇಎಸ್ ವಿದ್ಯಾಮಂದಿರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಮೂರು ದಿನಗಳ ಉಚಿತ ತರಬೇತಿ ಕಾರ್ಯಾಗಾರವನ್ನು ಎಸ್.ಆರ್.ಎಸ್. ಗೋಲ್ಡನ್ ಜುಬಿಲಿ ಹಾಲ್‌ನಲ್ಲಿ ಆಯೋಜಿಸಲಾಗಿತ್ತು. ಕಾಲೇಜಿನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.

ಕಾರ್ಯಾಗಾರವನ್ನು ಸ್ಮಯೋರ್ ಕಂಪನಿಯ ಹಿರಿಯ ಪ್ರಧಾನ ವ್ಯವಸ್ಥಾಪಕ ಪರ್ವತರೆಡ್ಡಿ ಪಾಟೀಲ್ ಉದ್ಘಾಟಿಸಿ ಮಾತನಾಡಿ, “ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ನಮ್ಮ ಮುಂದೆ ಒಂದು ಗುರಿ ಇರಬೇಕು ಹಾಗೂ ಹಿಂದೆ ಒಬ್ಬ ಗುರು ಇರಬೇಕು. ನಿರ್ದಿಷ್ಟ ಗುರಿಯನ್ನು ಹೊಂದಿ, ಅದಕ್ಕೆ ತಕ್ಕಂತೆ ಶ್ರಮವಹಿಸಿ ಕಾರ್ಯನಿರ್ವಹಿಸಬೇಕು. ಗುರುವಿನ ಮಾರ್ಗದರ್ಶನ ಮತ್ತು ಸ್ಫೂರ್ತಿ ದೊರೆತಾಗ ಗುರಿ ತಲುಪಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.

ವಿದ್ಯಾರ್ಥಿಗಳು ಸಮಯ ಮತ್ತು ಶ್ರಮವನ್ನು ಅನಗತ್ಯವಾಗಿ ವ್ಯರ್ಥ ಮಾಡಬಾರದು. ಸಮಯವು ಜೀವನದಲ್ಲಿ ಅತ್ಯಮೂಲ್ಯವಾಗಿದ್ದು, ಅದನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಬೇಕು. ತಮ್ಮ ಯಶಸ್ಸಿಗೆ ಪೂರಕವಾದ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಪ್ರತಿದಿನ ದಿನಚರಿ ಬರೆಯುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಸಮಯವನ್ನು ಹೇಗೆ ಬಳಸುತ್ತಿದ್ದೇವೆ, ನಿಗದಿಪಡಿಸಿದ ಕೆಲಸಗಳಲ್ಲಿ ಎಷ್ಟನ್ನು ಪೂರ್ಣಗೊಳಿಸಿದ್ದೇವೆ ಎಂಬುದನ್ನು ತಿಳಿದುಕೊಳ್ಳಬಹುದು. ಇದರಿಂದ ಸ್ವಯಂ ವಿಮರ್ಶೆ ಮಾಡಿಕೊಂಡು ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್‌ಇಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಜಗದೀಶ್ ಬಸಾಪುರ, ಕಾಲೇಜಿನ ಪ್ರಾಚಾರ್ಯ ಬಿ. ಶ್ರೀನಿವಾಸ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಉದಯಕುಮಾರ್ ಅವರು ಇತಿಹಾಸ ವಿಷಯದ ಕುರಿತು ಹಾಗೂ ಸತೀಶ್ ಬಸಾಪುರ ಅವರು ಆಂಗ್ಲ ಭಾಷೆಯ ಕುರಿತು ಉಪನ್ಯಾಸ ನೀಡಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಬಗ್ಗೆ ಮಾರ್ಗದರ್ಶನ ನೀಡಿದರು.




Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles