ಬಂಜಾರ ಸಮಾಜಕ್ಕೆ ಉಂಟಾಗಿರುವ ಹಿನ್ನಡೆ ನಿವಾರಣೆಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸುವಂತೆ ಮನವಿ
ಬೆಳಗಾಯಿತು ವಾರ್ತೆ
ಹಡಗಲಿ: ರಾಜ್ಯದ ಬಂಜಾರ (ಲಂಬಾಣಿ) ಸಮಾಜಕ್ಕೆ ಒಳ ಮೀಸಲಾತಿ ಹಾಗೂ ರೋಸ್ಟರ್ ಬಿಂದು ವಿಚಾರದಲ್ಲಿ ಉಂಟಾಗಿರುವ ಗೊಂದಲಕ್ಕೆ ಸೂಕ್ತ ಪರಿಹಾರ ಕಲ್ಪಿಸುವಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಬಂಜಾರ ಸಮಾಜದ ಪರವಾಗಿ ಮಾಜಿ ಸಚಿವ ಪಿ.ಟಿ ಪರಮೇಶ್ವರ ನಾಯ್ಕ್ ಅವರು ಮಂಗಳವಾರ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ಬಂಜಾರ ಸಮಾಜದ ಸದ್ಯದ ಪರಿಸ್ಥಿತಿ ಹಾಗೂ ಒಳ ಮೀಸಲಾತಿ ಮತ್ತು ರೋಸ್ಟರ್ ಬಿಂದು ವಿಚಾರದಿಂದ ಸಮುದಾಯಕ್ಕೆ ಉಂಟಾಗಿರುವ ಹಿನ್ನಡೆಯ ಹಿನ್ನೆಲೆಯಲ್ಲಿ ಸಮಾಜದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಈ ಕುರಿತು ಸಮಗ್ರ ಚರ್ಚೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಕುರಿತು ಮುಖ್ಯಮಂತ್ರಿ ನೇತೃತ್ವದಲ್ಲಿ ವಿಶೇಷ ಸಭೆ ಕರೆದು, ಬಂಜಾರ ಸಮಾಜದ ಸಮಸ್ಯೆಗಳನ್ನು ಆಲಿಸಿ, ಸಮುದಾಯಕ್ಕೆ ನ್ಯಾಯ ಒದಗಿಸುವ ರೀತಿಯಲ್ಲಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಬಂಜಾರ ಸಮಾಜದ ಪರವಾಗಿ ಪಿ.ಟಿ. ಪರಮೇಶ್ವರನಾಯ್ಕ ಅವರು ಮನವಿ ಮಾಡಿದ್ದಾರೆ.
ಒಳ ಮೀಸಲಾತಿ ಹಾಗೂ ರೋಸ್ಟರ್ ಬಿಂದು ವಿಚಾರದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ, ಬಂಜಾರ ಸಮುದಾಯದ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.





