ಬೆಳಗಾಯಿತು ವಾರ್ತೆ
ಹಳೇ ದರೋಜಿ (ಸಂಡೂರು): ಬಳ್ಳಾರಿ ಜಿಲ್ಲಾಧಿಕಾರಿಗಳು ರಾಜ್ಯದ ಕಾಂಗ್ರೆಸ್ ಸರಕಾರದ ಒತ್ತಡಕ್ಕೆ ಒಳಗಾದಂತೆ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಹಳೇ ದರೋಜಿಯಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ನಡೆಯುತ್ತಿರುವ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಜಿಲ್ಲಾಡಳಿತ ಮೀನಮೇಷ ಮಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಾವು ಮಾತನಾಡುವುದಾಗಿ ತಿಳಿಸಿದರು.
ಶಾಂತಿಯುತವಾಗಿ ನಡೆಯುತ್ತಿರುವ ಪಾದಯಾತ್ರೆಯನ್ನು ಇಡೀ ರಾಜ್ಯ ಹಾಗೂ ದೇಶದ ಜನರು ಗಮನಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ಪ್ರಜಾಪ್ರಭುತ್ವದಲ್ಲಿ ಹೋರಾಟದ ಹಕ್ಕು:
ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಶಾಂತಿಯುತವಾಗಿ ಹೋರಾಟ ನಡೆಸುವುದು ಪ್ರತಿಯೊಬ್ಬರ ಹಕ್ಕಾಗಿದೆ. ಇದು ಜನಪರ ಹೋರಾಟವಾಗಿದ್ದು, ಅದನ್ನು ತಡೆಯುವ ಪ್ರಯತ್ನ ಮಾಡಬಾರದು ಎಂದು ವಿಜಯೇಂದ್ರ ಹೇಳಿದರು.
ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮಕ್ಕೆ ಅನುಮತಿ ನೀಡದಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಅವರು, “ಯಾಕೆ ಅನುಮತಿ ನೀಡುವುದಿಲ್ಲ; ನಾನೂ ನೋಡುವೆ. ಕೊಟ್ಟೇ ಕೊಡುತ್ತಾರೆ” ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.





