ಬೆಳಗಾಯಿತು ವಾರ್ತೆ
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರದ ನೂತನ ಸಚಿವ ಸಂಪುಟಕ್ಕೆ ಖಾತೆ ಹಂಚಿಕೆ ಪ್ರಕ್ರಿಯೆ ಬಹುತೇಕ ಅಂತಿಮಗೊಂಡಿದೆ. ಕಾಂಗ್ರೆಸ್ ಹೈಕಮಾಂಡ್ನೊಂದಿಗೆ ನಡೆದ ಚರ್ಚೆಯ ಬಳಿಕ 14 ಸಚಿವರಿಗೆ ಖಾತೆಗಳನ್ನು ನಿಗದಿಪಡಿಸಲಾಗಿದ್ದು, ಇನ್ನೂ ಆರು ಸಚಿವರಿಗೆ ಖಾತೆ ಹಂಚಿಕೆ ಬಾಕಿ ಉಳಿದಿದೆ.
ನೂತನವಾಗಿ ಕೃಷಿ ಖಾತೆಯನ್ನು ಎನ್. ಚಲುವರಾಯಸ್ವಾಮಿ, ಸಮಾಜ ಕಲ್ಯಾಣವನ್ನು ಕೆ.ಎಚ್. ಮುನಿಯಪ್ಪ, ಸಣ್ಣ ನೀರಾವರಿಯನ್ನು ಎಚ್.ಸಿ. ಬಾಲಕೃಷ್ಣ, ಕಾರ್ಮಿಕ ಖಾತೆಯನ್ನು ಸಂತೋಷ್ ಲಾಡ್ ಅವರಿಗೆ ನೀಡಲು ನಿರ್ಧರಿಸಲಾಗಿದೆ.
ಕೆ. ಬಸವಂತಪ್ಪ ಅವರಿಗೆ ಮೀನುಗಾರಿಕೆ ಮತ್ತು ಬಂದರು, ಮಧು ಬಂಗಾರಪ್ಪ ಅವರಿಗೆ ಪ್ರಾಥಮಿಕ ಶಿಕ್ಷಣ, ಬಸವರಾಜ ರಾಯರೆಡ್ಡಿ ಅವರಿಗೆ ಉನ್ನತ ಶಿಕ್ಷಣ, ಜಮೀರ್ ಅಹ್ಮದ್ ಖಾನ್ ಅವರಿಗೆ ವಸತಿ, ಯು.ಟಿ. ಖಾದರ್ ಅವರಿಗೆ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್, ರಿಜ್ವಾನ್ ಅರ್ಷದ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು, ಲಕ್ಷ್ಮಣ ಸವದಿ ಅವರಿಗೆ ಸಹಕಾರ, ಅಜಯ್ ಸಿಂಗ್ ಅವರಿಗೆ ಅರಣ್ಯ, ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಗಣಿ ಮತ್ತು ಭೂವಿಜ್ಞಾನ ಸೇರಿದಂತೆ ವಿವಿಧ ಖಾತೆಗಳನ್ನು ಹಂಚಿಕೆ ಮಾಡುವ ಬಗ್ಗೆ ನಿರ್ಧಾರವಾಗಿದೆ.
ಇದರೊಂದಿಗೆ ಪುಟ್ಟರಂಗಶೆಟ್ಟಿ, ಶಿವರಾಜ್ ತಂಗಡಗಿ ಸೇರಿದಂತೆ ಕೆಲ ಸಚಿವರ ಖಾತೆಗಳ ಬಗ್ಗೆಯೂ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದು ವರದಿಗಳು ತಿಳಿಸಿವೆ.
ನಾಗೇಂದ್ರಗೆ ಇನ್ನೂ ಖಾತೆ ನಿಗದಿಯಾಗಿಲ್ಲ
ಬಳ್ಳಾರಿ ಗ್ರಾಮೀಣ ಶಾಸಕ ಹಾಗೂ ನೂತನ ಸಚಿವ ಬಿ. ನಾಗೇಂದ್ರ ಅವರಿಗೆ ಯಾವ ಖಾತೆ ನೀಡಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ. ನಾಗೇಂದ್ರ ಸೇರಿದಂತೆ ಕೆಲವು ಸಚಿವರಿಗೆ ಖಾತೆ ಹಂಚಿಕೆ ಬಾಕಿಯಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ರಾಜ್ಯಪಾಲರಿಗೆ ಕಳುಹಿಸಿದ ಬಳಿಕ ಅಧಿಕೃತ ಅಧಿಸೂಚನೆ ಹೊರಬೀಳಲಿದೆ.
ಈ ಹಿನ್ನೆಲೆಯಲ್ಲಿ ನಾಗೇಂದ್ರ ಅವರಿಗೆ ಯಾವ ಖಾತೆ ಸಿಗಲಿದೆ ಎಂಬುದು ಬಳ್ಳಾರಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಅಧಿಕೃತ ಅಧಿಸೂಚನೆ ಹೊರಬರುವವರೆಗೆ ಖಾತೆ ಹಂಚಿಕೆಯನ್ನು ಅಂತಿಮ ಎಂದು ಪರಿಗಣಿಸಲಾಗುವುದಿಲ್ಲ.





