ಬೆಳಗಾಯಿತು ವಾರ್ತೆ| Www.belagayithu.in
ಬಳ್ಳಾರಿ: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಜುಲೈ 25ರಂದು ಕ್ಯಾಂಡಲ್ ಮಾರ್ಚ್ ಹಾಗೂ ಜುಲೈ 26ರಂದು ಅಮರ್ ಜವಾನ್ ಸ್ಮಾರಕದ ಬಳಿ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಎಕ್ಸ್-ಸರ್ವಿಸ್ಮೆನ್ ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಅಣ್ಣಗೇರಿ ವೀರಪ್ರತಾಪ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 25ರಂದು ಸಂಜೆ ಎಸ್ಪಿ ಸರ್ಕಲ್ನಿಂದ ಎಸ್ಪಿ ಕಚೇರಿ ಸಮೀಪದ ಅಮರ್ ಜವಾನ್ ಸ್ಮಾರಕದವರೆಗೆ ಸುಮಾರು ಎರಡು ಕಿಲೋಮೀಟರ್ ದೂರ ಕ್ಯಾಂಡಲ್ ಮಾರ್ಚ್ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜುಲೈ 26ರಂದು ಸಂಜೆ 8.30ಕ್ಕೆ ಅಮರ್ ಜವಾನ್ ಸ್ಮಾರಕದ ಮುಂಭಾಗದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಲಿದ್ದು, ನಗರದ ಗಣ್ಯರು, ಮಾಜಿ ಸೈನಿಕರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ನಮನ ಸಲ್ಲಿಸುವುದರ ಜೊತೆಗೆ, ಅವರ ತ್ಯಾಗ, ದೇಶಭಕ್ತಿ ಹಾಗೂ ಸೈನಿಕರ ಸೇವೆಯ ಮಹತ್ವವನ್ನು ಯುವಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕ್ಯಾಂಡಲ್ ಮಾರ್ಚ್ನಲ್ಲಿ ರೈತ ಸಂಘದ ಸದಸ್ಯರು, ಎನ್ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಸಾರ್ವಜನಿಕರು, ಜಿಲ್ಲಾ ಆಡಳಿತದ ಅಧಿಕಾರಿಗಳು ಹಾಗೂ ಬಳ್ಳಾರಿಯ ವಿವಿಧ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಜಿಲ್ಲೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ್ ಹವಾಲ್ದಾರ್, ಮಲ್ಲಿಕಾರ್ಜುನ, ರಾಮಕೃಷ್ಣ, ವೀರ, ನಾರಿ, ಚಂದ್ರಕಲಾ, ವಿಜಯ, ಸರೋಜ, ಗಿರಿಜಾ, ಮಂಜುಳಾ, ಪ್ರವೀಣ್ಬೈ, ರಾಜಶೇಖರ್, ವಿನಯ್ ಕುಮಾರ್, ಸುಭಾಷ್ ಚಂದ್ರಬೋಸ್, ರುದ್ರಮುನಿ, ಅಂಜಿನಪ್ಪ, ಸುರೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.





