ಎಸ್‌ಐಆರ್ ಸಮೀಕ್ಷೆ ರದ್ದುಪಡಿಸಲು ಆಗ್ರಹ

ಬೆಳಗಾಯಿತು ವಾರ್ತೆ | Www.belagayithu.in
ಬಳ್ಳಾರಿ: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಗ್ರಹಿಸಿದರು.
ನಗರದ ಸಿರುಗುಪ್ಪ ರಸ್ತೆಯ ಹಾವಂಬಾವಿ ಪ್ರದೇಶದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದೆಯೇ ಎಂಬ ಗಂಭೀರ ಅನುಮಾನ ವ್ಯಕ್ತಪಡಿಸಿದರು.
ಕೆಲ ಬಿಎಲ್ಓ ಅಧಿಕಾರಿಗಳು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, “ಮುಖ್ಯಮಂತ್ರಿಗಳ ಮಾತಿಗೆ ಕುರಿಗಳಂತೆ ತಲೆ ಆಡಿಸುತ್ತಿರುವ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯಕ್ಕೆ ಧಕ್ಕೆ ಉಂಟುಮಾಡುತ್ತಿದ್ದಾರೆ” ಎಂದು ಟೀಕಿಸಿದರು.
ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುವ ಬದಲು ಕೆಲ ಅಧಿಕಾರಿಗಳು ಶಾದಿ ಮಹಲ್ ಹಾಗೂ ಸಮುದಾಯ ಭವನಗಳಲ್ಲಿ ಕುಳಿತು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ ಶ್ರೀರಾಮುಲು, ಇಂತಹ ರೀತಿಯಲ್ಲಿ ನಡೆದಿರುವ ಎಸ್‌ಐಆರ್ ಸಮೀಕ್ಷೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ನಿಯಮ ಉಲ್ಲಂಘಿಸಿ ಕರ್ತವ್ಯ ನಿರ್ವಹಿಸಿರುವ ಬಿಎಲ್ಓ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಬಂಧಿಸಬೇಕು ಎಂದರು.
ರಾಜ್ಯ ಸರ್ಕಾರ ಎಸ್‌ಐಆರ್ ಪ್ರಕ್ರಿಯೆಯ ಪಾವಿತ್ರ್ಯವನ್ನು ಹಾಳು ಮಾಡುತ್ತಿದ್ದು, ಚುನಾವಣಾ ವ್ಯವಸ್ಥೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ದೇಶದ ಭದ್ರತೆಗಿಂತ ಚುನಾವಣೆ ಮುಖ್ಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿರುವ ಬಾಂಗ್ಲಾದೇಶಿ ವಲಸಿಗರಿಗೆ ಗುರುತಿನ ಚೀಟಿ ಒದಗಿಸುವ ಕಾರ್ಯಕ್ಕೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ ಶ್ರೀರಾಮುಲು, ಇಂತಹ ಕ್ರಮಗಳು ದೇಶದ ಭದ್ರತೆಗೆ ಅಪಾಯಕಾರಿಯಾಗಿವೆ ಎಂದು ಹೇಳಿದರು. ಮತಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಇಂತಹ ನೀತಿಗಳನ್ನು ಅನುಸರಿಸುತ್ತ ಬಂದಿದೆ ಎಂದು ದೂರಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಎಸ್‌ಐಆರ್ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡು ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ. 2028ರಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬುದು ಅವರ ಹಗಲು ಕನಸು” ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಮೊತಕರ್ ಶ್ರೀನಿವಾಸ್, ವೀರಶೇಖರ್ ರೆಡ್ಡಿ, ಪಾಲಿಕೆ ಸದಸ್ಯರಾದ ಗುಡಿಗಂಟಿ ಹನುಮಂತ, ಒಬ್ಳೇಶ್, ಮಾಜಿ ಬುಡಾ ಅಧ್ಯಕ್ಷ ಪಾಲಣ್ಣ, ಕೆ.ಎಸ್. ಅಶೋಕ್ ಕುಮಾರ್, ವೆಂಕಟರಮಣ ರೆಡ್ಡಿ, ಹನುಮಂತಪ್ಪ, ಸಿದ್ದೇಶ್ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles