ಬೆಳಗಾಯಿತು ವಾರ್ತೆ| Www.belagayithu.in
ಬಳ್ಳಾರಿ: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಡಬಲ್ ಬ್ಯಾರೆಲ್ ಬಂದೂಕು ಹಾಗೂ ಪಿಸ್ತೂಲ್ ಹಿಡಿದು ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ರೀಲ್ಸ್ ಮಾಡಿ ಹಂಚಿಕೊಂಡಿದ್ದ ಮೂವರು ಯುವಕರ ವಿರುದ್ಧ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 3ರಂದು ಸಂಜೆ ಕೌಲ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡಿಹಟ್ಟಿ ಗ್ರಾಮದ ಎಚ್.ಎಲ್.ಸಿ. ಕಾಲುವೆ ದಂಡೆಯ ಮೇಲೆ ಮೂವರು ಯುವಕರು ನಕಲಿ ಡಬಲ್ ಬ್ಯಾರೆಲ್ ಬಂದೂಕು ಹಾಗೂ ಪಿಸ್ತೂಲ್ ಹಿಡಿದು ವಿಡಿಯೋ ಚಿತ್ರೀಕರಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡುವ ರೀತಿಯಲ್ಲಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಕ್ರಮ ಕೈಗೊಂಡಿದ್ದಾರೆ.
ಈ ಸಂಬಂಧ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 135/2026 ದಾಖಲಿಸಲಾಗಿದ್ದು, ಆರ್ಮ್ಸ್ ಆಕ್ಟ್ ಕಲಂ 27(1) ಹಾಗೂ **ಬಿ.ಎನ್.ಎಸ್.-2023ರ ಕಲಂ 351(2) ಮತ್ತು 3(5)**ರಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ವಿಡಿಯೋದಲ್ಲಿ ಬಳಸಿರುವ ನಕಲಿ ಡಬಲ್ ಬ್ಯಾರೆಲ್ ಬಂದೂಕು ಹಾಗೂ ಪಿಸ್ತೂಲ್ ವಶಪಡಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳು ಹಾಗೂ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ವಹಿಸುವ ವಿಶೇಷ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರು ಹಂಚಿಕೊಳ್ಳುವ ಫೋಟೋ, ವಿಡಿಯೋ, ಬರಹ ಸೇರಿದಂತೆ ಎಲ್ಲ ರೀತಿಯ ಪೋಸ್ಟ್‌ಗಳನ್ನು ಪರಿಶೀಲಿಸಲಾಗುತ್ತಿದೆ.
ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ, ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟುಮಾಡುವ ಅಥವಾ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದ ಫೋಟೋ, ವಿಡಿಯೋ ಅಥವಾ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್, ಐಪಿಎಸ್ ಎಚ್ಚರಿಕೆ ನೀಡಿದ್ದಾರೆ.








