ಬೆಳಗಾಯಿತು ವಾರ್ತೆ
ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 2024-25ನೇ ಸಾಲಿನ 14ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ನ. 16ರಂದು ಬೆಳಿಗ್ಗೆ 11.30ಕ್ಕೆ ನಗರದ ವಿಶ್ವವಿದ್ಯಾಲಯದ ಬಯಲು ರಂಗಮಂದಿರ ಆವರಣದಲ್ಲಿ ನಡೆಯಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಮುನಿರಾಜು ಅವರು ತಿಳಿಸಿದರು.
ನಗರದ ವಿಎಸ್ ಕೆ ವಿವಿಯ ಸಭಾಂಗಣದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಮತ್ತು ಒಡಿಶಾ ಹೈಕೋರ್ಟ್ಗಳ ನಿವೃತ್ತ ನ್ಯಾಯಮೂರ್ತಿ ನ್ಯಾ. ಡಾ. ಕೃಷ್ಣ ಎಸ್. ದೀಕ್ಷಿತ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ರಾಜ್ಯದ ಉನ್ನತ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾಲಯದ ಉಪಕುಲಾಧಿಪತಿಗಳಾದ ಬಸವರಾಜ ರಾಯರೆಡ್ಡಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದರು.
ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ಕುಲಸಚಿವರಾದ ಪ್ರೊ. ವಿ. ಲೋಕೇಶ್, ಮೌಲ್ಯಮಾಪನ ಕುಲಸಚಿವರಾದ ಪ್ರೊ. ಪಿ. ಕಣ್ಣನ್, ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಕಾಲೇಜುಗಳ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
42 ವಿದ್ಯಾರ್ಥಿಗಳಿಗೆ 50 ಚಿನ್ನದ ಪದಕ
ಈ ಬಾರಿಯ ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ವಿವಿಧ ವಿಭಾಗಗಳ ಒಟ್ಟು 42 ವಿದ್ಯಾರ್ಥಿಗಳು 50 ಚಿನ್ನದ ಪದಕಗಳನ್ನು ಪಡೆದು ಸಾಧನೆ ಮೆರೆಲಿದ್ದಾರೆ. ವಿವಿಧ ವಿಭಾಗಗಳ 52 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಸ್ವೀಕರಿಸಲಿದ್ದಾರೆ.
ಇದಲ್ಲದೆ, ಸ್ನಾತಕ ಪದವಿಯ 66 ಹಾಗೂ ಸ್ನಾತಕೋತ್ತರ ಪದವಿಯ 71 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 137 ವಿದ್ಯಾರ್ಥಿಗಳಿಗೆ ಬ್ಯಾಂಕ್ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತದೆ.
ಸ್ನಾತಕೋತ್ತರ ವಿಭಾಗದಲ್ಲಿ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಶ್ರೀ ಗುರು ತಿಪ್ಪೇರುದ್ರ ಕಾಲೇಜು, ಬಳ್ಳಾರಿಯ ಸವಿತಾ ಅವರು ನಾಲ್ಕು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದಲ್ಲಿ ವಿಶ್ವವಿದ್ಯಾಲಯದ ಮುಖ್ಯ ಆವರಣದ ತಸ್ಮಿಯಾಬಾನು ಆರ್. ಅವರು ಮೂರು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ನಾಲ್ವರು ವಿದ್ಯಾರ್ಥಿಗಳು ತಲಾ ಎರಡು ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ. ಜತೆಗೆ ಸ್ನಾತಕ ಪದವಿ ವಿಭಾಗದಲ್ಲಿಯೂ ವಿವಿಧ ಕಾಲೇಜುಗಳ ನಾಲ್ವರು ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ ಎಂದರು.
ಮೂವರಿಗೆ ಗೌರವ ಡಾಕ್ಟರೇಟ್
ಈ ಬಾರಿಯ ಘಟಿಕೋತ್ಸವದಲ್ಲಿ ಶಿಕ್ಷಣ, ಸಮಾಜಸೇವೆ, ಸಾಹಿತ್ಯ, ಪರಿಸರ, ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮೂವರು ಗಣ್ಯರಿಗೆ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ.
ಡಾ. ಹೆನ್ರಿ ಡಿಸೋಜಾ, ಶ್ರೀ ಚನ್ನಬಸವಣ್ಣ ಸಿ.,
ಶ್ರೀಮತಿ ಗೀತಾ ನಾಗಪಾಲ್ ಡಾಕ್ಟರೇಟ್ ಗೌರವ ಪಡೆಯಲಿದಾರೆ.
ಶೇ.95.33ರಷ್ಟು ಪರೀಕ್ಷಾ ಫಲಿತಾಂಶ
ವಿಶ್ವವಿದ್ಯಾಲಯದ ಪರೀಕ್ಷಾ ಫಲಿತಾಂಶದಲ್ಲಿಯೂ ಉತ್ತಮ ಸಾಧನೆ ದಾಖಲಾಗಿದೆ. ಸ್ನಾತಕ ಪದವಿಯ ಅಂತಿಮ ಪರೀಕ್ಷೆಗೆ ಒಟ್ಟು 13,346 ವಿದ್ಯಾರ್ಥಿಗಳು ಹಾಜರಾಗಿ ಪದವಿ ಪೂರ್ಣಗೊಳಿಸಿದ್ದಾರೆ. ಸ್ನಾತಕೋತ್ತರ ಪದವಿ ಹಾಗೂ ಸ್ನಾತಕೋತ್ತರ ಡಿಪ್ಲೋಮಾ ಸೇರಿದಂತೆ ಒಟ್ಟು 1,448 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದಾರೆ.
ಸ್ನಾತಕ, ಸ್ನಾತಕೋತ್ತರ ಹಾಗೂ ಸ್ನಾತಕೋತ್ತರ ಡಿಪ್ಲೋಮಾ ವಿಭಾಗಗಳನ್ನು ಒಟ್ಟುಗೂಡಿಸಿದಾಗ ವಿಶ್ವವಿದ್ಯಾಲಯವು ಈ ಬಾರಿ ಶೇ.95.33ರಷ್ಟು ಫಲಿತಾಂಶ ದಾಖಲಿಸಿದೆ ಎಂದರು.
ಒಟ್ಟಾರೆ, 50 ಚಿನ್ನದ ಪದಕಗಳು, 52 ಡಾಕ್ಟರೇಟ್ ಪದವಿಗಳು ಹಾಗೂ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನದೊಂದಿಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವವು ವಿಶೇಷ ಮಹತ್ವ ಪಡೆದುಕೊಂಡಿದೆ.
ಈ ಸಂದರ್ಭದಲ್ಲಿ ಕುಲಸಚಿವರಾದ ಪ್ರೊ. ವಿ.ಲೋಕೇಶ್, ಮೌಲ್ಯಮಾಪನ ಕುಲಸಚಿವರಾದ ಪ್ರೊ. ಪಿ. ಕಣ್ಣನ್ ಇದ್ದರು.





