ಬಳ್ಳಾರಿಯಲ್ಲಿ 350 ಕೋಟಿ ರೂ. ಜಿಎಸ್‌ಟಿ ವಹಿವಾಟಿನ ಶಾಕ್!

ಬೆಳಗಾಯಿತು ವಾರ್ತೆ
ಬಳ್ಳಾರಿ
:ತಿಂಗಳಿಗೆ ಕೇವಲ 15 ಸಾವಿರ ರೂಪಾಯಿ ಸಂಬಳ ಪಡೆದು ಜೀವನ ಸಾಗಿಸುತ್ತಿದ್ದ ಯುವಕನೊಬ್ಬನ ಹೆಸರಿನಲ್ಲಿ ಕೇವಲ ಐದೇ ತಿಂಗಳಲ್ಲಿ ಬರೋಬ್ಬರಿ 350 ಕೋಟಿ ರೂಪಾಯಿ ಜಿಎಸ್‌ಟಿ ವಹಿವಾಟು ನಡೆದಿರುವ ಆರೋಪ ಬಳ್ಳಾರಿಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯ ಕುಟುಂಬದ ಯುವಕನೊಬ್ಬನ ಗುರುತಿನ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಇಷ್ಟೊಂದು ಬೃಹತ್ ಮೊತ್ತದ ವಹಿವಾಟು ನಡೆಸಿರುವ ಶಂಕೆ ಇದೀಗ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಂಬಳ ₹15 ಸಾವಿರ, ವಹಿವಾಟು ಮಾತ್ರ ₹350 ಕೋಟಿ!

ಬಳ್ಳಾರಿಯ ರೋಷನ್ ಎಂಬ ಯುವಕ ಟೊಯೋಟಾ ಶೋರೂಂನಲ್ಲಿ ಕೆಲಸ ಮಾಡಿಕೊಂಡು ತಿಂಗಳಿಗೆ ಸುಮಾರು 15 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ಎನ್ನಲಾಗಿದೆ. ಆದರೆ, ಈತನ ಹೆಸರಿನಲ್ಲಿ ‘ರೋಷನ್ ಎಂಟರ್‌ಪ್ರೈಸಸ್’ ಎಂಬ ಸಂಸ್ಥೆಯನ್ನು ನೋಂದಾಯಿಸಿ, ಪ್ಲಾಸ್ಟಿಕ್ ವ್ಯಾಪಾರದ ಹೆಸರಿನಲ್ಲಿ ಐದೇ ತಿಂಗಳಲ್ಲಿ ಸುಮಾರು 350 ಕೋಟಿ ರೂಪಾಯಿ ವಹಿವಾಟು ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ರೋಷನ್ ಅವರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಮನೆಯ ವಿದ್ಯುತ್ ಬಿಲ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಜಿಎಸ್‌ಟಿ ನೋಂದಣಿ ಮಾಡಲಾಗಿದೆ ಎಂಬುದು ಕುಟುಂಬದ ಆರೋಪವಾಗಿದೆ.
ಬ್ಯಾಂಕ್ ಖಾತೆ ಮುಚ್ಚಿದ್ದೇ ಅನುಮಾನಕ್ಕೆ ಕಾರಣ!
ಈ ಸಂಸ್ಥೆಯ ಹೆಸರಿನಲ್ಲಿ ನಡೆದಿದ್ದ ಬೃಹತ್ ವಹಿವಾಟಿನ ಬಳಿಕ ಬ್ಯಾಂಕ್ ಖಾತೆಯನ್ನು ಮುಚ್ಚಲಾಗಿದೆ ಎನ್ನಲಾಗಿದೆ. ಖಾತೆ ಮುಚ್ಚಿರುವುದನ್ನು ಗಮನಿಸಿದ ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ರೋಷನ್ ಅವರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕಾರಿಗಳು ಮನೆಗೆ ಬಂದ ಬಳಿಕವಷ್ಟೇ ತಮ್ಮ ಹೆಸರಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದ ವಹಿವಾಟು ನಡೆದಿರುವ ವಿಚಾರ ರೋಷನ್ ಕುಟುಂಬಕ್ಕೆ ತಿಳಿದಿದೆ ಎನ್ನಲಾಗಿದೆ.
ಹಮಾಲಿ ತಂದೆಗೆ ಆಘಾತ; ಕಣ್ಣೀರಿಟ್ಟ ಕುಟುಂಬ!
ರೋಷನ್ ಅವರ ತಂದೆ ಪಕೃದ್ದೀನ್ ಅವರು ಎಸಿ ಗೋಡೌನ್‌ನಲ್ಲಿ ಹಮಾಲಿ ಕೆಲಸ ಮಾಡಿಕೊಂಡು ದಿನಕ್ಕೆ ಸುಮಾರು 700 ರೂಪಾಯಿ ಸಂಪಾದಿಸುತ್ತಿದ್ದಾರೆ. ದುಡಿದು ಜೀವನ ಸಾಗಿಸುತ್ತಿರುವ ಬಡ ಕುಟುಂಬಕ್ಕೆ ಮಗನ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂಬ ಸುದ್ದಿ ಬರಸಿಡಿಲಿನಂತೆ ಎರಗಿದೆ.
ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಗೂ ಈ ಬೃಹತ್ ವಹಿವಾಟಿಗೂ ಯಾವುದೇ ಸಂಬಂಧವಿಲ್ಲ ಎಂಬ ಆತಂಕ ಕುಟುಂಬದವರನ್ನು ಕಾಡುತ್ತಿದೆ. ಮಗನ ದಾಖಲೆಗಳನ್ನು ಬಳಸಿಕೊಂಡು ಯಾರೋ ಅಕ್ರಮವಾಗಿ ವ್ಯವಹಾರ ನಡೆಸಿದ್ದಾರೆ ಎಂಬ ಅನುಮಾನದಿಂದ ಕುಟುಂಬ ಕಂಗಾಲಾಗಿದೆ.
ಜಿಎಸ್‌ಟಿ ಕಚೇರಿಯಿಂದ ಸೈಬರ್ ಕ್ರೈಂ ಠಾಣೆಗೆ!
ಕೆಲಸ ಮುಗಿಸಿ ಮನೆಗೆ ಬಂದ ರೋಷನ್, ತಕ್ಷಣವೇ ಜಿಎಸ್‌ಟಿ ಕಚೇರಿಗೆ ತೆರಳಿ ಪ್ರಕರಣದ ಕುರಿತು ಮಾಹಿತಿ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಅಲ್ಲಿ ಸಮರ್ಪಕ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ತಂದೆ-ತಾಯಿ ಸೇರಿದಂತೆ ಕುಟುಂಬದವರೊಂದಿಗೆ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ತಮ್ಮ ವೈಯಕ್ತಿಕ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಅಕ್ರಮ ವಹಿವಾಟು ನಡೆಸಿರುವವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಜಾಲದ ಹಿಂದೆ ಇರುವವರನ್ನು ಬಂಧಿಸಿ, ತಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ರೋಷನ್ ಕುಟುಂಬ ಆಗ್ರಹಿಸಿದೆ.
ಅಧಿಕಾರಿಗಳ ಪರಿಶೀಲನೆ ಎಲ್ಲಿತ್ತು?
ಇಷ್ಟೊಂದು ದೊಡ್ಡ ಮೊತ್ತದ ವಹಿವಾಟು ಕೇವಲ ಐದು ತಿಂಗಳಲ್ಲಿ ನಡೆದಿದ್ದರೂ, ಸಂಬಂಧಪಟ್ಟ ಅಧಿಕಾರಿಗಳಿಗೆ ಆರಂಭದಲ್ಲೇ ಅನುಮಾನ ಬರಲಿಲ್ಲವೇ? ಸಂಸ್ಥೆಯ ನೈಜ ಅಸ್ತಿತ್ವ, ವ್ಯಾಪಾರದ ಸ್ವರೂಪ ಹಾಗೂ ನೋಂದಣಿಗೆ ಸಲ್ಲಿಸಲಾದ ದಾಖಲೆಗಳ ಕುರಿತು ಸ್ಥಳ ಪರಿಶೀಲನೆ ನಡೆದಿತ್ತೇ? ಬ್ಯಾಂಕ್ ಖಾತೆಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುವಾಗ ಸೂಕ್ತ ನಿಗಾ ವಹಿಸಲಾಗಿತ್ತೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.
ತನಿಖೆಯಿಂದ ಹೊರಬರಬೇಕಿದೆ ಅಕ್ರಮ ಜಾಲದ ಮುಖ!
ಸದ್ಯ ರೋಷನ್ ಅವರ ಬ್ಯಾಂಕ್ ಖಾತೆ ಹಾಗೂ ಸಂಬಳದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎನ್ನಲಾಗಿದೆ. ರೋಷನ್ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಒಬ್ಬ ಸಾಮಾನ್ಯ ಉದ್ಯೋಗಿಯ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸಲು ಸಾಧ್ಯವಾಗಿದ್ದು ಹೇಗೆ? ದಾಖಲೆಗಳನ್ನು ಸಂಗ್ರಹಿಸಿದವರು ಯಾರು? ಜಿಎಸ್‌ಟಿ ನೋಂದಣಿಗೆ ಸಹಕರಿಸಿದವರು ಯಾರು? ಹಣದ ವಹಿವಾಟಿನ ಹಿಂದೆ ಯಾರಿದ್ದಾರೆ? ಎಂಬ ಹತ್ತಾರು ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ.
ಒಟ್ಟಿನಲ್ಲಿ, ತಿಂಗಳಿಗೆ ₹15 ಸಾವಿರ ಸಂಬಳ ಪಡೆಯುವ ಯುವಕನ ಹೆಸರಿನಲ್ಲಿ ₹350 ಕೋಟಿ ವಹಿವಾಟು ನಡೆದಿರುವ ಆರೋಪ ಬಡ ಕುಟುಂಬವೊಂದನ್ನು ಆತಂಕಕ್ಕೆ ದೂಡಿದೆ. ಅಮಾಯಕ ನಾಗರಿಕರ ಗುರುತಿನ ದಾಖಲೆಗಳನ್ನೇ ಅಕ್ರಮ ವಹಿವಾಟಿಗೆ ಬಳಸಿಕೊಳ್ಳುವ ಜಾಲಗಳಿದ್ದರೆ ಅವುಗಳನ್ನು ಬೇರುಸಹಿತ ಪತ್ತೆಹಚ್ಚುವುದು ಅತ್ಯಗತ್ಯವಾಗಿದೆ

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles