ಹೈದರಾಬಾದ್– ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಜೀವನ ಸಿನಿಮಾ ಆಗುತ್ತಿದೆ. ಜಗನ್ ತಂದೆ ರಾಜಶೇಖರ ರೆಡ್ಡಿ ಅವರ ಜೀವನ ‘ಯಾತ್ರಾ’ ಹೆಸರಲ್ಲಿ ಈಗಾಗಲೇ ಸಿನಿಮಾ ಆಗಿದ್ದು ಇದೀಗ ಜಗನ್ ಮೋಹನ್ ರೆಡ್ಡಿ ಜೀವನವೂ ಸಿನಿಮಾ ಆಗಲಿಕ್ಕೆ ಯೋಜನೆ ಸಿದ್ದವಾಗಿದೆ. ರಾಜಶೇಖರ್ ರೆಡ್ಡಿ ಅವರ ಜೀವನವನ್ನು ‘ಯಾತ್ರಾ’ ಹೆಸರಿನಲ್ಲಿ ಸಿನಿಮಾ ಮಾಡಿದ್ದ ನಿರ್ದೇಶಕ ವಿ.ರಾಘವ ಅವರೇ ಜಗನ್ ಜೀವನವನ್ನು ಸಹ ಸಿನಿಮಾ ಮಾಡಲು ತಯಾರಾಗಿದ್ದಾರೆ. ಸಿನಿಮಾದಲ್ಲಿ ಜಗನ್ ಪಾತ್ರವನ್ನು ಪ್ರತೀಕ್ ಗಾಂಧಿ ನಿರ್ವಹಿಸುವುದು ಬಹುತೇಕ ಖಚಿತವಾಗಿದ್ದು, ಪ್ರಸ್ತುತ ‘ರಾವಣ್ ಲೀಲ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಸ್ಕ್ಯಾಮ್ 1992’ ವೆಬ್ ಸರಣಿಯಲ್ಲಿ ತಮ್ಮ ಅತ್ಯುತ್ತಮ ಅಭಿನಯದಿಂದ ಬಾಲಿವುಡ್ ತಿರುಗಿ ನೋಡುವಂತೆ ಮಾಡಿರುವ ಪ್ರತೀಕ್ ಗಾಂಧಿ ಜಗನ್ ಪಾತ್ರ ನಿರ್ವಹಿಸಲು ಸೂಕ್ತ ವ್ಯಕ್ತಿಯಾಗಿದ್ದಾರೆ. ವೈ ಎಸ್ ಜಗನ್ ಜೀವನ ಸಿನಿಮೀಯ ತಿರುವುಗಳಿಂದ ಕೂಡಿದೆ. ಮುಖ್ಯಮಂತ್ರಿಯಾಗಿದ್ದ ರಾಜಶೇಖರ್ ರೆಡ್ಡಿ ಅಪಘಾತದಲ್ಲಿ ತೀರಿಕೊಂಡ ನಂತರ ಪಾರ್ಟಿ ಹೈಕಮಾಂಡ್ ಜಗನ್ ಅನ್ನು ನಡೆಸಿಕೊಂಡ ರೀತಿ. ಜಗನ್ ಆರಂಭಿಸಿದ ‘ಓದಾರ್ಪು ಯಾತ್ರಾ’ಗೆ ಅಡ್ಡಿ ಪಡಿಸಿದ ರಾಜಕೀಯ ಮುಖಂಡರುಗಳು. ನಂತರ ಪ್ರತ್ಯೇಕ ಪಕ್ಷ ಸ್ಥಾಪನೆ ಆ ನಂತರ ವಿವಿಧ ಪ್ರಕರಣಗಳಲ್ಲಿ ಜಗನ್ ಅನ್ನು ಸಿಲುಕಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು. ಬಂಧನ, ಜೈಲಿನಿಂದ ಹೊರಬಂದು ಪಕ್ಷ ಕಟ್ಟಿ ಭಾರಿ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು ಸೇರಿದಂತೆ ಎಲ್ಲ ಘಟನೆಗಳೂ ಚಿತ್ರದಲ್ಲಿರಲಿದೆ.