ಹೊಸದಿಲ್ಲಿ: ೧೪ನೇ ಉಪರಾಷ್ಟçಪತಿ ಹುದ್ದೆಗೆ ಆಕಾಂಕ್ಷಿಯಾಗಿ ಮಾರ್ಗರೆಟ್ ಆಳ್ವಾ ಇಂದು ವಿಪಕ್ಷಗಳ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಶಿವಸೇನೆ ನಾಯಕ ಸಂಜಯ್ ರಾವುತ್ ಮತ್ತು ಇತರ ವಿರೋಧ ಪಕ್ಷದ ನಾಯಕರು ಉಪಸ್ಥಿತರಿದ್ದರು.
ಉಪರಾಷ್ಟçಪತಿ ಚುನಾವಣೆಯಲ್ಲಿ ಮಾರ್ಗರೇಟ್ ಆಳ್ವ ಅವರನ್ನು ವಿರೋಧ ಪಕ್ಷದ ಜಂಟಿ ಅಭ್ಯರ್ಥಿಯಾಗಿದ್ದು, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಘೋಷಿಸಿದ್ದರು.೧೯೪೨, ಏಪ್ರಿಲ್ ೧೪ರಂದು ಮಂಗಳೂರಿನಲ್ಲಿ ಜನಿಸಿರುವ ಮಾರ್ಗರೇಟ್ ಆಳ್ವಾ ಅವರು, ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಕಾಂಗ್ರೆಸ್ ನಾಯಕರ ಪೀಳಿಗೆಯಿಂದ ಬಂದವರು. ೧೯೬೯ ರಲ್ಲಿ ಅವರು ಇಂದಿರಾ ಗಾಂಧಿಯವರ ನಿಷ್ಠೆಯೊಂದಿಗೆ ರಾಜಕೀಯಕ್ಕೆ ಪ್ರವೇಶಿಸಿದರು. ೧೯೭೪ ರಿಂದ ೧೯೯೮ ರವರೆಗೆ ಪಕ್ಷವು ಅವರನ್ನು ನಿರಂತರವಾಗಿ ರಾಜ್ಯಸಭೆಗೆ ಕಳುಹಿಸಿತು. ಇದರ ನಂತರ ಅವರು ೧೯೯೯ ರಿಂದ ೨೦೦೪ ರವರೆಗೆ ಲೋಕಸಭೆಯ ಸದಸ್ಯರಾಗಿದ್ದರು. ಒಮ್ಮೆ ಕ್ಯಾಬಿನೆಟ್ ಮಂತ್ರಿ ಹುದ್ದೆಯನ್ನೂ ಅಲಂಕರಿಸಿದ್ದರು. ಆದರೆ, ೨೦೦೪ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತರು. ನಂತರ ಆಳ್ವಾ ಅವರನ್ನು ಗೋವಾ, ರಾಜಸ್ಥಾನ, ಗುಜರಾತ್, ಉತ್ತರಾಖಂಡ್ ರಾಜ್ಯಗಳ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಯಿತು.