ಬಳ್ಳಾರಿ: ಗಣಿನಗರಿ ಬಳ್ಳಾರಿ ಮಹಾನಗರದಿಂದ ಅಣತಿ ದೂರದ ಸಂಗನಕಲ್ಲು ಗ್ರಾಮದಲ್ಲಿ ಬರೋಬ್ಬರಿ ಶತಮಾನ ಪೂರೈಸಿದ ಪುರಾತನ ಮನೆಯೊಂದಿದೆ. ಆ ಪುರಾತನ ಮನೆಯಲ್ಲಿ ಮೂರು ತಲೆಮಾರಿನ ಕುಟುಂಬಸ್ಥರು ಜೀವಿಸಿದ್ದಾರೆಂಬುದೇ ಇದೀಗ ಇತಿಹಾಸ.
ಪಕ್ಕಾ ಕಲ್ಲು ಹಾಗೂ ಮಣ್ಣಿನಿಂದ ನಿರ್ಮಿಸಲಾದ ಈ ಪುರಾತನ ಮನೆಯಲ್ಲಿ ಸದ್ಯ ಮರಿಮೊಮ್ಮಕ್ಕಳು ಕುಟುಂಬಸಮೇತ ವಾಸಿಸುತ್ತಿದ್ದಾರೆ. ಸಂಗನಕಲ್ಲು ಗ್ರಾಮದ ಹೃದಯ ಭಾಗವಾದ ಮಸೀದಿ ಬಳಿಯಿರುವ ಈ ಪುರಾತನ ಕಾಲದ ಮನೆಯಲ್ಲಿ ಬುಳ್ಳನಗೌಡರ ಮಕ್ಕಳ ಕೂಡು ಕುಟುಂಬ ವಾಸವಾಗಿದೆ. ಬುಳ್ಳನಗೌಡರ ತಂದೆಯ ಕಾಲದಲ್ಲಿ ಈ ಮನೆಯನ್ನ ನಿರ್ಮಾಣ ಮಾಡಲಾಗಿತ್ತು.
ಲಭ್ಯವಿರುವ ಪಕ್ಕಾ ನೈಸರ್ಗಿಕ ಸಂಪನ್ಮೂಲ ಗಳುಳ್ಳ ಕಟ್ಟಿಗೆ, ಸೈಜ್ ಗಲ್ಲು ಹಾಗೂ ಸುಣ್ಣ ಮಿಶ್ರಿತ ಮಣ್ಣಿನಿಂದ ಈ ಮನೆಯನ್ನ ನಿರ್ಮಿಸಲಾಗಿದೆ. ಈ ಮನೆಯೊಳಗೆ ಆರೇಳು ಕೊಠಡಿಗಳಿವೆ. ಅವುಗಳೆಲ್ಲಾ ಉತ್ತಮ ಗಾಳಿ, ಬೆಳಕಿನಿಂದ ಕೂಡಿವೆ. ಮಹಡಿ ಮೇಲೆ ಮಣ್ಣನ್ನ ಹಾಕಲಾಗಿದೆ. ಅದರಿಂದ ಈ ಮನೆ ಸದಾ ತಂಪಾಗಿರುತ್ತದೆ.
ಕೇವಲ ಕಟ್ಟಿಗೆಯಿಂದ ಪಿಲ್ಲರ್ ಹಾಕಲಾಗಿದೆ. ಛಾವಣಿಯಲ್ಲಿ ತೊಲೆ(ಕಟ್ಟಿಗೆ) ಹಾಗೂ ಉದ್ದನೆಯ ತೀರನ್ನ ಹಾಕಲಾಗಿದ್ದು, ಅದರ ಮೇಲ್ಭಾಗದಲ್ಲಿ ಬಿದಿರಿನ ತಡಿಕೆಗಳನ್ನ ಹಾಸಿ, ಅದರ ಮೇಲೆ ಸವಳು ಮಣ್ಣನ್ನ ಹಾಕಲಾಗಿದೆ. ಈ ಮನೆ ನಿರ್ಮಾಣದಲ್ಲಿ ಯಾವುದೇ ರೀತಿಯ ರಾಡ್ ಹಾಗೂ ಸಿಮೆಂಟ್ ಬಳಸಿಲ್ಲ. 3 ತಲೆಮಾರಿನ ಮಂದಿ ಇಲ್ಲಿ ವಾಸಿಸಿದ್ದು, ಸುಮಾರು 120 ವರ್ಷದ ಹಳೆಯ ಮನೆ ಇದಾಗಿದೆ.
ಹಳೆಯ ಮನೆಯಲ್ಲಿ ಏನೇನಿದೆ
ಅಂದಾಜು 5 ವಿಶಾಲವಾದ ಕೊಠಡಿಗಳಿವೆ. (ಬೆಡ್ ರೂಮ್, ಹಾಲ್, ಅಡುಗೆ ಮನೆ, ದೇವರ ಕೋಣೆ, ಕೋಣೆ) ಇದ್ದು, ಸುಮಾರು 16 ಕಂಬಗಳಿವೆ. 12 ತೊಲೆಗಳು, 6 ಬಾಗಿಲುಗಳಿವೆ. ಅಂದಾಜು 80- 100 ಅಡಿ ವಿಸ್ತೀರ್ಣವನ್ನ ಈ ಹಳೆಯ ಮನೆ ಹೊಂದಿದೆ. ಗೋಡೆಗಳನ್ನ ಸುಣ್ಣ- ಮಣ್ಣಿನಿಂದ ನಿರ್ಮಾಣ (ಗಚ್ಚಿನ ಗೋಡೆ) ಮಾಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬುಳ್ಳನ
ಗೌಡರ ಮಗನಾದ ರಾಘವರೆಡ್ಡಿ, ಮೂರು ತಲೆಮಾರಿನ ಸದಸ್ಯರು ಇಲ್ಲಿ ವಾಸಿಸುತ್ತಿ ದ್ದೇವೆ. ನಮ್ಮದು ಮೂರನೇ ತಲೆಮಾರು. ಇಂಥಹ ಮನೆಯಲ್ಲಿ ವಾಸವಾಗಿರೋದೇ ನನಗೆ ಬಹಳ ಖುಷಿ ಅನ್ನಿಸುತ್ತೆ. ಮಳೆಗಾಲ, ಚಳಿಗಾಲ, ಬಿರುಬೇಸಿಗೆಯ ಕಾಲಕ್ಕೆ ತಕ್ಕಂತೆ ಇದನ್ನು ನಿರ್ಮಿಸಲಾಗಿದೆ ಎಂದರು.
ದವಸ-ಧಾನ್ಯಗಳನ್ನ ಸಂಗ್ರಹಿಸಿಡಲು ಹಗೆವು ನಿರ್ಮಿಸಲಾಗಿದೆ. ಇಂಥಹ ಮನೆಯ ವಿನ್ಯಾಸ ಈಗ ಅಪರೂಪ. ಪ್ರಸ್ತುತ ಸಿಮೆಂಟ್ ಹಾಗೂ ಮರಳು ಮಿಶ್ರಿತ ಮನೆಗಳೇ ಹೆಚ್ಚಾಗಿ ಕಾಣಸಿಗುತ್ತವೆ. ಇಂಥಹದ್ದರಲ್ಲಿ ಇಂತಹ ಅಪರೂಪದ ಮನೆಯಲ್ಲಿ ವಾಸವಿರೋದು ನಮಗಂತೂ ವಿಶೇಷ ಖುಷಿ ತರಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.